ದನ ಮಾತೆಯೆಂದಾದರೆ ಕತ್ತೆಯನ್ನು ರಾಷ್ಟ್ರಪ್ರಾಣಿ ಮಾಡಿ: ಮರಾಠಿ ಸಾಹಿತಿ ಲಕ್ಷ್ಮಣ್ ಗಾಯಕ್‌ವಾಡ್
ತೃಶೂರ್,ಎ. 2: ದನವನ್ನು ಪವಿತ್ರವಾದ ತಾಯಿಯೆಂದು ಘೋಷಿಸುವುದಾದರೆ ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಪ್ರಸಿದ್ಧ ಮರಾಠಿ ಸಾಹಿತಿ ಲಕ್ಷ್ಮಣ್ ಗಾಯಕ್‌ವಾಡ್ ಹೇಳಿದ್ದಾರೆ. ಆದರೆ, ಯಾವ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಾಗಿಲ್ಲ.ಹಸಿವು ಇರುವವರೆಗೂ ಮನುಷ್ಯ ಪ್ರಾಣಿಗಳನ್ನು ಕೊಂದು ತಿನ್ನಲಿದ್ದಾನೆ.ಹಸಿವು ಇಲ್ಲದಾಗುವವರೆಗೂ ಇದು ಮುಂದುವರಿಯುವುದು ಎಂದು ಅವರು ಹೇಳಿದರು. ಕೇರಳ ಸಾಹಿತ್ಯ ಅಕಾಡಮಿ ಆಯೋಜಿಸಿದ್ದ ರಾಷ್ಟ್ರೀಯ ಪುಸ್ತಕೋತ್ಸವ ಮತ್ತು "ಎಯುತ್ತರಂಙ್" ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಹಸಿವಿನ ಕುರಿತು ಮಾತಾಡಲು ಸರಕಾರಗಳು ಸಿದ್ಧವಿಲ್ಲ. ಅದೇ ವೇಳೆ ಜನರು ಏನು ತಿನ್ನಬೇಕೆಂದು ಅವರು ನಿರ್ಧರಿಸುತ್ತಿದ್ದಾರೆ. ಯಾವತ್ತೂ ಬರಹಗಾರರು ಸತ್ಯವನ್ನು ಹೇಳಬೇಕು. ಎಷ್ಟು ಬರೆದರೂ ಭಾರತದಲ್ಲಿ ಜಾತೀಯತೆ,ಅಸ್ಪೃಶ್ಯತೆ ಹೋಗಿಲ್ಲ. ದಲಿತ, ಆದಿವಾಸಿ ವಿಭಾಗಗಳಲ್ಲಿ ಮತ್ತುಆದಿವಾಸಿ ಊರುಗಳಲ್ಲಿ ಹಸಿವಿನಿಂದ ಸಾಯುತ್ತಿರುವ ಘಟನೆಗಳು ನಡೆಯುತ್ತಿರುವಾಗ ಸನ್ಯಾಸಿಗಳು ಶತಕೋಟ್ಯಧೀಶರಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಹಿಳೆಯರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರಿಗೆ ಸಮಾನ ನ್ಯಾಯ ಬಗ್ಗೆ ಬರಹಗಾರನಲ್ಲಿ ಕನಸಿರಬೇಕು.
ಧರ್ಮ, ರಾಜಕೀಯ, ಅಧಿಕಾರ ಹಂಚಿಕೊಂಡು ಒಗ್ಗೂಡುವುದು ಅತ್ಯಂತ ಅಪಾಯಕಾರಿಯಾಗಿದೆ. ಎರಡು ಅಧಿಕಾರ ಒಂದುಗೂಡುವಲ್ಲಿ ಭಯೋತ್ಪಾದನೆ ಬೇರುಬಿಡುತ್ತದೆ. ಧರ್ಮ, ರಾಜಕೀಯ ಮತ್ತು ಅವರ ಅಧಿಕಾರವನ್ನು ಜನರ ಮೇಲೆ ಹೇರಬಾರದು ಎಂದು ಗಾಯಕ್‌ವಾಡ್ ಹೇಳಿದರು. ಅಕಾಡಮಿ ಅಧ್ಯಕ್ಷ ವೈಶಾಖನ್ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಸೇತು ಪ್ರಧಾನಭಾಷಣ ಮಾಡಿದರು.ಕೆ.ವಿ.ಮೋಹನ್ ಕುಮಾರ್, ಖದೀಜ ಮುಮ್ತಾಝ್, ಸಿ. ರಾವುಣ್ಣಿ, ಕೆ. ವಿ. ಬೇಬಿ, ಪ್ರೊ. ಗೋಪಾಲಕೃಷ್ಣನ್, ಡಾ.ಕೆ.ಪಿ. ಮೋಹನ್ ಮುಂತಾದವರು ಮಾತಾಡಿದರು. ಎ.10ರವರೆಗೆ ಪುಸ್ತಕೋತ್ಸವ ನಡೆಯಲಿದೆ.