ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರ ಸರಣಿಯಲ್ಲಿ ಪುಡಿಯಾದ ವಾಹನಗಳು, ಕಟ್ಟಡಗಳ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ ?

Update: 2017-04-03 09:47 GMT

ನ್ಯೂಯಾರ್ಕ್,ಎ.3: ಹಾಲಿವುಡ್‌ನ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರ ಸರಣಿಯಲ್ಲಿನ ಎಂಟನೇ ಚಿತ್ರ ‘ದಿ ಫೇಟ್ ಆಫ್ ಫ್ಯೂರಿಯಸ್ ’ ಬಿಡುಗಡೆಯಾಗಲು ಬೆರಳೆಣಿಕೆಯ ದಿನಗಳಷ್ಟೇ ಬಾಕಿಯುಳಿದಿವೆ. ಚಿತ್ರರಸಿಕರು ಭಾರೀ ಕಾತುರದಿಂದ ಕಾಯುತ್ತಿರುವ ಈ ಚಿತ್ರವೂ ಸರಣಿಯ ಹಿಂದಿನ ಚಿತ್ರಗಳಂತೆ ಬ್ಲಾಕ್ ಬಸ್ಟರ್ ಆಗುವ ನಿರೀಕ್ಷೆಯಿದೆ.

 ಕಳೆದ 16 ವರ್ಷಗಳಲ್ಲಿ ಇದು ಸೇರಿದಂತೆ ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯಲ್ಲಿ ಎಂಟು ಚಿತ್ರಗಳು ತಯಾರಾಗಿವೆ. ಮೊದಲ ಏಳು ಚಿತ್ರಗಳು ದೇಶದಲ್ಲಿ ಒಟ್ಟು 1.29 ಬಿ.ಡಾ.ಮತ್ತು ವಿಶ್ವಾದ್ಯಂತ 3.89 ಡಾ. ಆದಾಯ ಗಳಿಸಿವೆ. ವಿಶ್ವಾದ್ಯಂತ ಗಳಿಕೆಯ ಅರ್ಧಭಾಗ 2015ರಲ್ಲಿ ಬಿಡುಗಡೆಯಾಗಿದ್ದ ‘ಫ್ಯೂರಿಯಸ್ 7’ ಚಿತ್ರವೊಂದರಿಂದಲೇ ಬಂದಿದೆ.

‘ದಿ ಫೇಟ್ ಆಫ್ ಫ್ಯೂರಿಯಸ್ ’ ಚಿತ್ರವನ್ನು ಕಣ್ತುಂಬಿಕೊಳ್ಳಲು ಇತ್ತ ಅಭಿಮಾನಿಗಳು ಸಜ್ಜಾಗುತ್ತಿದ್ದರೆ, ಅತ್ತ ಬ್ರಿಟಿಷ್ ವಿಮೆ ಕಂಪನಿ ‘ಇನ್ಶೂರ್ ದಿ ಗ್ಯಾಪ್ (ಐಜಿ)’ ಈ ಚಿತ್ರಸರಣಿಯುದ್ದಕ್ಕೂ ಚಿತ್ರೀಕರಣದಲ್ಲಿ ಸಂಭವಿಸಿರುವ ಹಾನಿಯ ಮೊತ್ತವನ್ನು ಲೆಕ್ಕ ಹಾಕಿದ್ದು ಅಂತಿಮ ಅಂಕಿಸಂಖ್ಯೆಗಳು ದಿಗಿಲು ಮೂಡಿಸುವಂತಿವೆ.

ಈ ವರೆಗೆ ಬಿಡುಗಡೆಗೊಂಡಿರುವ ಎಲ್ಲ ಏಳು ಚಿತ್ರಗಳ ಚಿತ್ರೀಕರಣ ಸಂದರ್ಭದ ನಷ್ಟಗಳ ಮೊತ್ತ 514.3 ಮಿ.ಡಾ.(33,39,375 ಕೋ.ರೂ.) ಗಳಾಗಿವೆ ಎಂದು ಐಜಿ ಲೆಕ್ಕ ಹಾಕಿದೆ. 169 ಮಾಮೂಲಿ ವಾಹನಗಳು ಹಾನಿಗೀಡಾಗಿದ್ದು, 142 ಮಾಮೂಲಿ ವಾಹನಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು ಇದರಲ್ಲಿ ಸೇರಿದೆ.

ಐಜಿಯ ಆ್ಯಂಡ್ರೂ ಸಿಗಲ್ ಅವರು ಈ ಲೆಕ್ಕಾಚಾರವನ್ನು ಮಾಡಲು ಕಾರ್ ಕನ್ಸಲ್ಟಂಟ್ ನಚೋ ಲ್ಯಾಸೆರ್ ಅವರ ನೆರವು ಪಡೆದಿದ್ದರು. ಇದಕ್ಕಾಗಿ ಗಂಟೆಗಟ್ಟಲೆ ಕಾಲ ಎಲ್ಲ ಏಳೂ ಚಿತ್ರಗಳನು ವೀಕ್ಷಿಸಲಾಗಿತ್ತು.

ಚಿತ್ರಸರಣಿಯಲ್ಲಿ ಧ್ವಂಸಗೊಂಡಿರುವ ಅತ್ಯಂತ ದುಬಾರಿ ಕಾರೆಂದರೆ ಫ್ಯೂರಿಯಸ್ 7 ಗಾಗಿ ಬಳಕೆಯಾಗಿದ್ದ ಲೈಕನ್ ಹೈಪರ್‌ಸ್ಪೋರ್ಟ್. ಇದೊಂದೇ ಕಾರಿನ ಮೌಲ್ಯ 3.4 ಮಿ.ಡಾ.ಗಳಾಗಿವೆ. ಮಾಮೂಲು ಕಾರುಗಳ ಜೊತೆಗೆ 37 ವಿಶೇಷ ವಾಹನಗಳೂ ಧ್ವಂಸಗೊಂಡಿವೆ. ಇವುಗಳಲ್ಲಿ ಕಸ್ಟಮ್ ಮೇಡ್ ಮತ್ತು ರೇಸ್ ಕಾರುಗಳು, ಬಸ್ ಮತ್ತು ರೈಲುಗಳು, ಬೈಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಮಿಲಿಟರಿ ವಾಹನಗಳು ಸೇರಿವೆ.

ಏಳು ಚಿತ್ರಗಳಲ್ಲಿ ಒಟ್ಟು 53 ಕಟ್ಟಡಗಳು ಹಾನಿಗೀಡಾಗಿದ್ದು, 32 ಕಟ್ಟಡಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಹಾನಿಗೀಡಾದ ಐಟಂಗಳ ಒಟ್ಟು ಸಂಖ್ಯೆ 432.

ಈ ಚಿತ್ರಗಳಲ್ಲಿಯ ಖಳನಾಯಕರಿಗಿಂತ ನಾಯಕರೇ ಹೆಚ್ಚಿನ ಹಾನಿಗೆ ಕಾರಣರಾಗಿದ್ದಾರೆ ಎನ್ನುವುದನ್ನು ಐಜಿ ಬೆಳಕಿಗೆ ತಂದಿದೆ. ನಾಯಕ ನಟರು ಮಾಡಿರು ವ ಹಾನಿಯ ಮೊತ್ತ 320.2 ಮಿ.ಡಾ.ಆಗಿದ್ದರೆ, ಖಳನಾಯಕರಿಂದ 194.1 ಮಿ.ಡಾ.ನಷ್ಟ ಸಂಭವಿಸಿದೆ.

   ಸರಣಿಯಲ್ಲಿನ ನಷ್ಟದ ಸಿಂಹಪಾಲು ಸಂಭವಿಸಿರುವುದು ಫಾಸ್ಟ್ ಫೈವ್,ಫಾಸ್ಟ್ ಆ್ಯಂಡ್ ಫ್ಯೂರಿಯಸ್ 6 ಮತ್ತು ಫ್ಯೂರಿಯಸ್ 7 ಚಿತ್ರಗಳಿಂದ ಎನ್ನುವುದನ್ನು ಐಜಿ ಬೆಟ್ಟು ಮಾಡಿದೆ. ಮೊದಲ ನಾಲ್ಕು ಚಿತ್ರಗಳ ಚಿತ್ರೀಕರಣ ಸಂದರ್ಭ ಕೆಲವೇ ಮಿಲಿಯನ್ ಡಾ.ನಷ್ಟ ಸಂಭವಿಸಿದ್ದರೆ, ಫಾಸ್ಟ್ ಫೈವ್ 20 ಮಿ.ಡಾ.ಗೂ ಅಧಿಕ ನಷ್ಟಕ್ಕೆ ಸಾಕ್ಷಿಯಾಗಿತ್ತು. ಫಾಸ್ಟ್ ಆ್ಯಂಡ್ ಫ್ಯೂರಿಯಸ್ 6 ಸುಮಾರು 200 ಮಿ.ಡಾ. ಮತ್ತು ಫ್ಯೂರಿಯಸ್ 7 ಸುಮಾರು 290 ಮಿ.ಡಾ.ನಷ್ಟಕ್ಕೆ ಕಾರಣವಾಗಿದ್ದವು.

ಎ.14ರಂದು ‘ದಿ ಫೇಟ್ ಆಫ್ ಫ್ಯೂರಿಯಸ್ ’ ಬಿಡುಗಡೆಗೊಳ್ಳುವುದರೊಂದಿಗೆ ನಷ್ಟದ ಮೊತ್ತದಲ್ಲಿ ಭಾರೀ ಏರಿಕೆಯ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News