1 ಲ.ರೂ.ವರೆಗೆ ಸಾಲ ಮನ್ನಾಕ್ಕೆ ಉತ್ತರ ಪ್ರದೇಶ ಸರಕಾರದ ನಿರ್ಧಾರ
Update: 2017-04-04 23:18 IST
ಲಕ್ನೋ,ಎ.4: ಮಂಗಳವಾರ ಇಲ್ಲಿ ನಡೆದ ಆದಿತ್ಯನಾಥ ಸಂಪುಟದ ಪ್ರಪ್ರಥಮ ಸಭೆಯಲ್ಲಿ ಒಂದು ಲಕ್ಷ ರೂ.ವರೆಗಿನ ಕೃಷಿಸಾಲಗಳನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ತನ್ಮೂಲಕ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಯು ಈಡೇರಿದಂತಾಗಿದೆ.
ಈ ಕ್ರಮದಿಂದ ಸರಕಾರದ ಬೊಕ್ಕಸದ ಮೇಲೆ 31,000 ಕೋ.ರೂ.ಗಳ ಹೊರೆ ಬೀಳಲಿದ್ದು, 2.15 ಕೋ.ರೈತರಿಗೆ ಲಾಭವಾಗಲಿದೆ.
ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ನಷ್ಟಕ್ಕೊಳಗಾಗಿರುವ ರಾಜ್ಯದ ರೈತರು ಸುಮಾರು 62,000 ಕೋ.ರೂ.ಗಳ ಸಾಲವನ್ನು ಮರುಪಾವತಿಸಲಾಗದ ಸ್ಥಿತಿಯಲ್ಲಿದ್ದಾರೆ.
ಬಿಜೆಪಿಯು ಅಧಿಕಾರಕ್ಕೆ ಬಂದರೆ ರೈತರ ಸಾಲಗಳನ್ನು ಮನ್ನಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭ ಭರವಸೆ ನೀಡಿದ್ದರು.
ರಾಜ್ಯದಲ್ಲಿ 2.15ಕೋ-2.30 ಕೋಟಿ ಸಣ್ಣ ರೈತರಿದ್ದಾರೆ.