ವಾರದೊಳಗೆ ಮಾಂಸದಂಗಡಿ ಪರವಾನಿಗೆಗಳನ್ನು ನವೀಕರಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

Update: 2017-04-05 10:30 GMT

ಅಲಹಾಬಾದ್,ಎ.5: ಪೌರ ಸಂಸ್ಥೆಯ ದುರಾಡಳಿತದ ವಿರುದ್ಧ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಮಾ.31ಕ್ಕೆ ಅಂತ್ಯಗೊಂಡಿರುವ ಮಟನ್ ಮತ್ತು ಚಿಕನ್ ಮಾರಾಟದ ಅಂಗಡಿಗಳ ನಿರ್ದೇಶದೊಂದಿಗೆ ಕಠಿಣ ಆದೇಶವನ್ನು ಹೊರಡಿಸಿದೆ. ಅಲ್ಲದೆ ಮುಂದಿನ ಹತ್ತು ದಿನಗಳಲ್ಲಿ ಪ್ರತಿ ಎರಡು ಕಿ.ಮೀ.ಗೆ ಒಂದರಂತೆ ಆಡುಗಳು ಮತ್ತು ಕೋಳಿಗಳ ವಧೆಗೆ ಕಸಾಯಿಖಾನೆಗಳ ಸೌಲಭ್ಯವನ್ನು ಕಲ್ಪಿಸುವಂತೆಯೂ ಅದು ಆದೇಶಿಸಿದೆ ಎಂದು ಉರ್ದು ದೈನಿಕವೊಂದು ವರದಿ ಮಾಡಿದೆ.

ಮುಂದಿನ ವಿಚಾರಣೆಯನ್ನು ಎ.30ಕ್ಕೆ ನಿಗದಿಗೊಳಿಸಿದ ನ್ಯಾಯಾಲಯವು ತನ್ನ ಆದೇಶಗಳ ಅನುಷ್ಠಾನಕ್ಕೆ ಆಡಳಿತವನ್ನು ಹೊಣೆಗಾರನಾಗಿ ಮಾಡುವುದಾಗಿ ತಿಳಿಸಿತು.

ಬಹ್ರೈಚ್‌ನ ಸಯೀದ್ ಅಹ್ಮದ್ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ.ಪಿ.ಶಾಹಿ ಮತ್ತು ಸಂಜಯ ಹರ್ಕೋಳಿ ಅವರ ಪೀಠವು ಈ ಆದೇಶಗಳನ್ನು ಹೊರಡಿಸಿದೆ. ಮಾಂಸದಂಗಡಿಗಳ ಪರವಾನಿಗೆಗಳ ನವೀಕರಣವನ್ನು ಮಾಡದಿರುವುದು ರಾಜ್ಯದಲ್ಲಿಯ ಲಕ್ಷಾಂತರ ಜನರ ಜೀವನೋಪಾಯವನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ತಮ್ಮ ಪರವಾನಿಗೆಗಳನ್ನು ನವೀಕರಿಸಲು ವಿಫಲಗೊಂಡಿರುವ ಆಡಳಿತವು ಅಸಾಂವಿಧಾನಿಕ ರೀತಿಯಲ್ಲಿ ವರ್ತಿಸಿರುವುದರಿಂದ ತಮ್ಮ ಅಂಗಡಿಗಳಿಗೆ ಅಕ್ರಮ ಎಂಬ ಹಣೆಪಟ್ಟಿ ಹಚ್ಚಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ತನ್ಮಧ್ಯೆ,ಕೋಣದ ಮಾಂಸ ಮಾರಾಟಕ್ಕೆ ವ್ಯಾಪಾರಿಗಳ ಪರವಾನಿಗೆಗಳನ್ನು ನವೀಕರಿಸದ್ದಕ್ಕೆ ಸಂಬಂಧಿಸಿದಂತೆ ಶಹಾಬುದ್ದೀನ್ ಮತ್ತು ಇತರರು ಸಲ್ಲಿಸಿರುವ ರಿಟ್ ಅರ್ಜಿಯೊಂದರ ಕುರಿತಂತೆ ಲಕ್ನೋ ಪೀಠವು ಮಹಾನಗರ ಪಾಲಿಕೆಗೆ ನೋಟಿಸ್ ಹೊರಡಿಸಿದೆ ಎಂದೂ ಉರ್ದು ದೈನಿಕವು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News