ಕೇರಳ ಡಿಜಿಪಿಗೆ ವಿಎಸ್ ಅಚ್ಯುತಾನಂದನ್ ಚಾಟಿ

Update: 2017-04-05 10:46 GMT

ತಿರುವನಂತಪುರಂ,ಎ. 5: ಪೊಲೀಸ್ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ ಜಿಷ್ಣುವಿನ ಅಮ್ಮ ಮಹಿಜಾ ಮತ್ತು ಕುಟುಂಬ ಸದಸ್ಯರನ್ನು ತಡೆದ ಪೊಲೀಸರ ಕ್ರಮವನ್ನು ಉದ್ಧರಿಸಿ ಕೇರಳದ ಮಾಜಿ ಮುಖ್ಯಮಂತ್ರಿಹಾಗೂ ಆಡಳಿತ ಸುಧಾರಣಾ ಆಯೋಗದ ಆಧ್ಯಕ್ಷ ವಿಎಸ್ ಅಚ್ಯುತಾನಂದನ್ ಡಿಜಿಪಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ಡಿಜಿಪಿಗೆ ಫೋನ್ ಕರೆಮಾಡಿದ ಅವರು ಉಪಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಸರಕಾರದ ವಿರುದ್ಧ ಅಭಿಪ್ರಾಯಮೂಡಿಸುವ ಪ್ರಯತ್ನ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಪಾಂಬಡಿ ನೆಹರೂ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಜಿಷ್ಣು ನಿಗೂಢ ಸಾವು ಪ್ರಕರಣದ ಆರೋಪಿಗಳನ್ನು ಬಂಧಿಸಬೇಕೆಂದು ಜಿಷ್ಣುವಿನ ಅಮ್ಮ ತಿರುವನಂತಪುರಂ ಪೊಲೀಸ್ ಕೇಂದ್ರದಲ್ಲಿ ಕುಟುಂಬದವರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರ ಕ್ರಮಕ್ಕೆ ಆಕ್ರೋಶ ಗೊಂಡಿರುವ ವಿಎಸ್ ಅಚ್ಯುತಾನಂದನ್" ಆರೋಪಿಗಳನ್ನು ಬಂಧಿಸುವ ಬದಲು, ದೂರು ಹೇಳಲೂ ಬಂದವರನ್ನೇ ಬಂಧಿಸುವ ಕೆಲಸವನ್ನು ಮಾಡುತ್ತಿದ್ದೀರಾ ಎಂದು ಡಿಜಿಪಿ ಲೋಕನಾಥ್ ಬೆಹ್ರಾರನ್ನು ಪ್ರಶ್ನಿಸಿದ್ದಾರೆ. ಡಿಜಿಪಿ ಉತ್ತರಿಸಲು ಪ್ರಯತ್ನಿಸಿದರೂ ಅವರ ಉತ್ತರಕ್ಕೆ ವಿಎಸ್ ಕಾಯದೆ ಫೋನ್ ಕೆಳಗಿಟ್ಟರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಕೇಂದ್ರದ ಮುಂದೆ ಜಿಷ್ಣುವಿನ ತಾಯಿ ಮಹಿಜಾ ಮತ್ತು ಕುಟುಂಬ ಸದಸ್ಯರು ಪ್ರತಿಭಟನೆ ನಿರತರಾಗಿದ್ದ ವೇಳೆ ಪೊಲೀಸರು ಬಂಧಿಸಿ ಕಚೇರಿಯ ಮುಂದಿನಿಂದ ತೆರವು ಗೊಳಿಸಿದ್ದಾರೆ. ಇದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ವಿಪಕ್ಷವಾದ ಕಾಂಗ್ರೆಸ್, ಬಿಜೆಪಿ ಪೊಲೀಸ್ ಕ್ರಮವನ್ನು ಕಟುವಾಗಿ ಟೀಕಿಸಿವೆ. ಇದೇ ವೇಳೆ ಜಿಷ್ಣುವಿನ ಅಮ್ಮ ಮಹಿಜಾರು ಗಾಯಗೊಂಡಿದ್ದಾರೆ ಎಂದು ಅವರ ಸಹೋದರ ಶ್ರೀಜಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News