×
Ad

ಆಧಾರ್ ವ್ಯವಸ್ಥೆಯಿಂದ ಮಾಹಿತಿ ಸೋರಿಕೆಯಾಗಿಲ್ಲ: ಸರಕಾರ

Update: 2017-04-05 17:53 IST

ಹೊಸದಿಲ್ಲಿ,ಎ.5: ಆಧಾರ್ ವ್ಯವಸ್ಥೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸರಕಾರವು ಬುಧವಾರ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಈ ಸ್ಪಷ್ಟನೆ ನೀಡಿದ ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕಾನೂನು ಮತ್ತು ನ್ಯಾಯ ಸಚಿವ ಪಿ.ಪಿ.ಚೌಧರಿ ಅವರು, ಯಾವುದೇ ಕಾರಣಕ್ಕೂ ತನ್ನ ಸಚಿವಾಲಯದಿಂದ ಆಧಾರ್ ಮಾಹಿತಿ ಸೋರಿಕೆಯಾಗಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸಿಪಿಎಂ ಸದಸ್ಯ ಎ.ಬಿ.ರಾಜೇಶ್ ಅವರು ವಿಷಯದ ಕುರಿತು ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಚೌಧರಿ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಆಧಾರ್ ಮಾಹಿತಿ ಸೋರಿಕೆಯನ್ನು ಪ್ರಸ್ತಾಪಿಸಿ, ಆಧಾರ್ ನೋಂದಣಿಗಾಗಿ ಧೋನಿಯವರ ನಿವಾಸಕ್ಕೆ ತೆರಳಿದ್ದ ವ್ಯಕ್ತಿಯು ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಮತ್ತು ಮಾಹಿತಿಯು ಅಲ್ಲಿಂದ ಸೋರಿಕೆಯಾಗಿದ್ದಿದ್ದರೆ ಅದಕ್ಕೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಈವರೆಗೆ ಆಧಾರ್ ವ್ಯವಸ್ಥೆಯಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದರು.

ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ರಾಜೇಶ್, ಆಧಾರ ದತ್ತಾಂಶ ಸೋರಿಕೆಯು ಗಂಭೀರ ವಿಷಯವಾಗಿದೆ ಎಂದರು.
ಧೋನಿಯವರ ಪತ್ನಿಯ ಹೆಸರನ್ನೆತ್ತದೆ,ಅವರು ಸೋರಿಕೆ ವಿಷಯವನ್ನು ಪ್ರಸಾಪಿಸಿದ್ದನ್ನು ಬೆಟ್ಟು ಮಾಡಿದ ರಾಜೇಶ್, ದತ್ತಾಂಶ ಸೋರಿಕೆಯಾಗಿದ್ದನ್ನು ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯವು ಒಪ್ಪಿಕೊಂಡಿದೆ ಎಂದರು.

ಒಬ್ಬನೇ ವ್ಯಕ್ತಿಗೆ ಎರಡು ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ ಎಂಬ ಟಿವಿ ವರದಿಯನ್ನೂ ಪ್ರಸ್ತಾಪಿಸಿದ ಅವರು, ದತ್ತಾಂಶಗಳ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಅಸಮರ್ಥವಾಗುವ ಮೂಲಕ ಸರಕಾರವು ತಪ್ಪೆಸಗಿದೆ. ಆಧಾರ್ ವ್ಯವಸ್ಥೆಯ ಮೇಲಿನ ಸಂಪೂರ್ಣ ವಿಶ್ವಾಸಾರ್ಹತೆ ಹೊರಟುಹೋಗಿದೆ ಎಂದರು. ದತ್ತಾಂಶ ಸೋರಿಕೆಯನ್ನು ತಡೆಯಲು ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ವಿವರಿಸುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News