×
Ad

23 ವರ್ಷಗಳ ಬಳಿಕ ಸಮುದ್ರ ಮಾರ್ಗದ ಮೂಲಕ ಹಜ್ ಯಾತ್ರೆ ಪುನರಾರಂಭಗೊಳ್ಳುವ ಸಾಧ್ಯತೆ

Update: 2017-04-05 19:46 IST

 ಹೊಸದಿಲ್ಲಿ,ಎ.5: ಮುಸ್ಲಿಮರು ತಮ್ಮ ವಾರ್ಷಿಕ ಹಜ್ ಯಾತ್ರೆಯ ಸಂದರ್ಭದಲ್ಲಿ ಸಲ್ಲಿಸುವ ‘ತಲ್ಬಿಯಾ’ ಪ್ರಾರ್ಥನೆಯ ನಿನಾದ ಸುಮಾರು ಕಾಲು ಶತಮಾನದ ವಿರಾಮದ ಬಳಿಕ ಮತ್ತೊಮ್ಮೆ ಮುಂಬೈ ಬಂದರಿನಲ್ಲಿ ಅನುರಣಿಸಬಹುದು.

 2018ರ ಹಜ್ ನೀತಿಯನ್ನು ರೂಪಿಸಲು ಸರಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯು ಮುಂದಿನ ವರ್ಷದಿಂದ ಯಾತ್ರಿಗಳನ್ನು ಸಮುದ್ರ ಮಾರ್ಗದ ಮೂಲಕ ಸೌದಿ ಅರೇಬಿಯಾದ ಜಿದ್ದಾಕ್ಕೆ ಕಳುಹಿಸುವ ಪರ್ಯಾಯಕ್ಕೆ ಮರುಜೀವ ನೀಡುವ ಬಗ್ಗೆ ಪರಿಶೀಲಿಸುತ್ತಿದೆ.

 ಹಜ್ ಯಾತ್ರಿಗಳನ್ನು ಸಾಗಿಸುತ್ತಿದ್ದ ಎಂ.ವಿ.ಅಕ್ಬರಿ ಹಡಗು ಹಳೆಯದಾಗಿದ್ದರಿಂದ ಮುಂಬೈ-ಜಿದ್ದಾ ನಡುವೆ ಸಮುದ್ರ ಮಾರ್ಗದ ಮೂಲಕ ಯಾತ್ರಿಗಳನ್ನು ಕರೆದೊಯ್ಯುವ ವ್ಯವಸ್ಥೆ 1995ರಿಂದ ಸ್ಥಗಿತಗೊಂಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಮೂಲವೊಂದು ತಿಳಿಸಿದೆ.

ವಿಮಾನಯಾನದ ಮೂಲಕ ಹಜ್‌ಗೆ ತೆರಳುವ ಯಾತ್ರಿಗಳಿಗೆ ಸಹಾಯಧನ ನೀಡುವುದನ್ನು 2022ರ ವೇಳೆಗೆ ನಿಲ್ಲಿಸುವಂತೆ 2012ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಈ ಪರ್ಯಾಯ ಮಾರ್ಗದ ಸಾಧ್ಯಾಸಾಧ್ಯತೆಗಳ ಬಗ್ಗೆ ಈಗ ಪರಿಶೀಲನೆ ನಡೆಯುತ್ತಿದೆ.

ಯಾತ್ರಿಗಳನ್ನು ಹಡಗುಗಳ ಮೂಲಕ ಕಳುಹಿಸುವುದರಿಂದ ವಿಮಾನಯಾನಕ್ಕೆ ಹೋಲಿಸಿದರೆ ಪ್ರಯಾಣವೆಚ್ಚ ಅರ್ಧದಷ್ಟಾಗುತ್ತದೆ ಮತ್ತು ಸಬ್ಸಿಡಿ ಅನುಪಸ್ಥಿತಿಯಲ್ಲಿ ಈ ವೆಚ್ಚವು ಹೊರೆಯಾಗುವುದಿಲ್ಲ ಎಂದು ಮೂಲವು ಹೇಳಿತು.

 ಪ್ರಸ್ತುತ ಹಜ್ ಯಾತ್ರಿಗಳು ಮುಂಬೈ ಮತ್ತು ದಿಲ್ಲಿ ಸೇರಿದಂತೆ ರಾಷ್ಟ್ರಾದ್ಯಂತ ನಿಗದಿತ 21 ವಿಮಾನ ನಿಲ್ದಾಣಗಳ ಮೂಲಕ ತೆರಳುತ್ತಾರೆ.
 ಈಗಿನ ದಿನಗಳಲ್ಲಿ ಹಡಗುಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದು, ಒಂದು ಬಾರಿಗೆ 4,000-5,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಮುಂಬೈ-ಜಿದ್ದಾ ನಡವಿನ 2,300 ನಾಟಿಕಲ್ ಮೈಲು ಅಂತರವನ್ನು ಅವು ಕೇವಲ 2-3 ದಿನಗಳಲ್ಲಿ ಕ್ರಮಿಸುತ್ತವೆ. ಒಂದು ನಾಟಿಕಲ್ ಮೈಲು 1.8 ಕಿ.ಮೀ.ಗೆ ಸಮನಾಗಿದೆ.

 ಹಡಗುಗಳ ಮೂಲಕ ಹಜ್ ಯಾತ್ರೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಹಾಯಕ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಅವರು ಈ ವಾರ ಮುಂಬೈನಲ್ಲಿ ನಡೆದಿದ್ದ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು. ಮುಂಬೈ ಜೊತೆಗೆ ಕೋಲ್ಕತಾ ಮತ್ತು ಕೊಚ್ಚಿ ಬಂದರುಗಳನ್ನೂ ಹಜ್ ಯಾತ್ರೆಗೆ ಬಳಸಿಕೊಳ್ಳುವ ಸಂಭಾವ್ಯ ತಾಣಗಳಾಗಿ ಸಮಿತಿಯು ಗುರುತಿಸಿದೆ.

 1995ರಲ್ಲಿ ಸಮುದ್ರ ಮಾರ್ಗದ ಮೂಲಕ ಹಜ್ ಯಾತ್ರಿಗಳು ಮುಂಬೈನಿಂದ ಜಿದ್ದಾ ತಲುಪಲು ಸುಮಾರು ಒಂದು ವಾರ ತಗಲುತ್ತಿತ್ತು ಎಂದು ಸಚಿವಾಲಯದ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News