ಆಹಾರಕ್ರಮದ ಆಯ್ಕೆ ಬದುಕಿನ ಹಕ್ಕು :ಹೈಕೋರ್ಟ್

Update: 2017-04-05 17:14 GMT

ಲಕ್ನೊ, ಎ.5: ಆಹಾರಕ್ರಮದ ಆಯ್ಕೆ ಮತ್ತು ಆಹಾರ ಪದಾರ್ಥಗಳ ವ್ಯಾಪಾರ ಅವರವರ ಬದುಕಿನ ಹಕ್ಕಾಗಿದೆ ಎಂದು ತಿಳಿಸಿರುವ ಅಲಹಾಬಾದ್ ಹೈಕೋರ್ಟ್, ಅಕ್ರಮ ಕಸಾಯಿಖಾನೆ ಮತ್ತು ಮಾಂಸದಂಗಡಿಗಳನ್ನು ಮುಚ್ಚುವ ಸರಕಾರದ ಕ್ರಮವು ಜನರ ಜೀವನಾಧಾರ ವೃತ್ತಿ ಅಥವಾ ಆಹಾರವನ್ನು ಕಸಿದುಕೊಳ್ಳದ ರೀತಿಯಲ್ಲಿ ಸೂಕ್ತ ಯೋಜನೆಯನ್ನು 10 ದಿನದ ಒಳಗೆ ರೂಪಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಉತ್ತರಪ್ರದೇಶದಲ್ಲಿ ಹಲವು ಆಹಾರ ಸಂಸ್ಕೃತಿಯಿದ್ದು ಇದು ರಾಜ್ಯದ ಜಾತ್ಯಾತೀತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೈಕೋರ್ಟ್‌ನ ಲಕ್ನೊ ಪೀಠ ತಿಳಿಸಿದೆ. ತನ್ನ ಮಾಂಸದಂಗಡಿಯ ಪರವಾನಿಗೆಯನ್ನು ನವೀಕರಿಸುವಂತೆ ಉ.ಪ್ರ.ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವ್ಯಾಪಾರಿಯೋರ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾನೂನು ಬಾಹಿರ ಚಟುವಟಿಕೆಯನ್ನು ನಿಷೇಧಿಸುವ ಸಂದರ್ಭದಲ್ಲೇ ಕಾನೂನು ಸಮ್ಮತವಾದ ಚಟುವಟಿಕೆ ನಡೆಸಲು ಆಸ್ಪದ ಮಾಡಿಕೊಡಬೇಕು. ವಿಶೇಷವಾಗಿ ಆಹಾರ, ಆಹಾರ ಪದ್ಧತಿ, ಆಹಾರದ ಮಾರಾಟ ಇತ್ಯಾದಿಗಳು ಬದುಕುವ ಹಕ್ಕಿಗೆ ಸಂಬಂಧಿಸಿದೆ ಎಂದು ನ್ಯಾಯಮೂರ್ತಿಗಳಾದ ಅಮರೇಶ್ವರ ಪ್ರತಾಪ್ ಸಾಹಿ ಮತ್ತು ಸಂಜಯ್ ಹರ್‌ಕೌಲಿ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಗ್ಯಕ್ಕೆ ಪೂರಕವಾಗಿರುವ ಆಹಾರವನ್ನು ತಪ್ಪು ಆಯ್ಕೆ ಎಂದು ಪರಿಗಣಿಸಬಾರದು. ಇಂತಹ ಆಹಾರ ಪೂರೈಕೆಯಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿತು.

 ಇದಕ್ಕೆ ಉತ್ತರಿಸಿದ ಸರಕಾರ, ಮಾಂಸವನ್ನು ನಿಷೇಧಿಸುವ ಅಥವಾ ಎಲ್ಲಾ ಕಸಾಯಿಖಾನೆಗಳನ್ನೂ ನಿಷೇಧಿಸುವ ಯೋಜನೆಯಿಲ್ಲ. ಸುಪ್ರೀಂಕೋರ್ಟ್‌ನ ಆದೇಶದಂತೆ ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸಿ, ಕಸಾಯಿಖಾನೆಗಳ ಚಟುವಟಿಕೆಯನ್ನು ಕ್ರಮಬದ್ಧಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿತು. ತಮ್ಮ ಪರವಾನಿಗೆಯನ್ನು ನವೀಕರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದು ಈ ಎಲ್ಲಾ ಅರ್ಜಿಗನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿ, ಮುಂದಿನ ವಿಚಾರಣೆಯನ್ನು ಎಪ್ರಿಲ್ 13ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News