×
Ad

ಎಲ್ಲ ವಿಮಾನ ಸಂಸ್ಥೆಗಳಿಂದ ಬಹಿಷ್ಕೃತ ಶಿವಸೇನಾ ಸಂಸದ ಕೊನೆಗೆ ಹೋಗಿದ್ದು ಈ ವಿಮಾನದಲ್ಲಿ !

Update: 2017-04-06 11:11 IST

ಹೊಸದಿಲ್ಲಿ, ಎ.6: ಏರ್ ಇಂಡಿಯಾ ವಿಮಾನ ಸಂಸ್ಥೆಯ ಹಿರಿಯ ಅಧಿಕಾರಿಗೆ  ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ವಿಮಾನಯಾನಕ್ಕೆ ವಿವಿಧ ವಿಮಾನ ಸಂಸ್ಥೆಗಳಿಂದ ನಿಷೇಧ ಎದುರಿಸುತ್ತಿರುವ ಮಹಾರಾಷ್ಟ್ರದ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌  ಬಾಡಿಗೆ ವಿಮಾನದ ಮೂಲಕ ಕೊನೆಗೂ ಪುಣೆಯಿಂದ ದಿಲ್ಲಿಗೆ ಹಾರಿದ್ದಾರೆ.
ಶಿವಸೇನೆಯ ಎಂಪಿ ರಾಜ್‌ ಕುಮಾರ್ ಧೂತ್ ಅವರು ರವೀಂದ್ರ ಗಾಯಕ್ ವಾಡ್‌ಗೆ ಬಾಡಿಗೆ ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ರವೀಂದ್ರ  ಗಾಯಕ್‌ವಾಡ್‌   ಸಂಸತ್ತಿನ ಅಧಿವೇಶನಲ್ಲಿ ಭಾಗವಹಿಸಲು ಬಾಡಿಗೆ ವಿಮಾನದಲ್ಲಿ  ಪುಣೆಯಿಂದ ಸಂಜೆ 3 ಗಂಟೆಗೆ ಹೊರಟು ಸಂಜೆ 5 ಗಂಟೆಗೆ ದಿಲ್ಲಿಗೆ ತಲುಪಿದರು ಎಂದು ತಿಳಿದು ಬಂದಿದೆ.
ಗಾಯಕ್‌ವಾಡ್ ವಿಮಾನಗಳಲ್ಲಿ ಪ್ರಯಾಣಕ್ಕೆ ನಿಷೇಧ ಹೇರಲ್ಪಟ್ಟ ಬಳಿಕ ಮೊದಲ ಬಾರಿ ವಿಮಾನದಲ್ಲಿ  ದಿಲ್ಲಿಗೆ ತೆರಳಿ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.
ದಿಲ್ಲಿಗೆ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರವೀಂದ್ರ  ಗಾಯಕ್‌ವಾಡ್‌   "ನಾನೊಬ್ಬ ಬಡವ ನನಗೆ ಚಾರ್ಟರ್‌ ವಿಮಾನ ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ವಿವಿಧ ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್‌ಗೆ ಪ್ರಯಾಣಕ್ಕೆ ನಿಷೇಧ ಹೇರಿದ ಬಳಿಕ  ಗಾಯಕ್‌ವಾಡ್‌   ವಿವಿಧ ಹೆಸರುಗಳಲ್ಲಿ ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಲು ವಿಫಲ ಯತ್ನ ನಡೆಸಿದ್ದರು. ಪ್ರೊಫೆಸರ್‌ ರವೀಂದ್ರ ಗಾಯಕ್‌ವಾಡ್‌, ಪ್ರೊಫೆಸರ್‌ ವಿ ರವೀಂದ್ರ  ಗಾಯಕ್‌ವಾಡ್‌  ಹೀಗೆ ಬೇರೆ ಹೆಸರುಗಳಲ್ಲಿ ವಿಮಾನ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದರೂ, ಅವರ ಪ್ರಯತ್ನ ಫಲ ನೀಡಿರಲಿಲ್ಲ.
ರವೀಂದ್ರ ಗಾಯಕ್‌ವಾಡ್ ಅವರ ಇಂತಹ ಕೃತ್ಯದಿಂದಾಗಿ ಬಿಜೆಪಿ ಎಂಪಿ ಸುನೀಲ್‌ ಗಾಯಕ್‌ವಾಡ್‌ ಅವರು ಸಮಸ್ಯೆ ಎದುರಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಹೆಸರಿನ ಮುಂದೆ ’ಗಾಯಕ್ ವಾಡ್ ಎಂದಿರುವ ’ಹಿನ್ನೆಲೆಯಲ್ಲಿ ಸುನೀಲ್‌ ಗಾಯಕ್‌ವಾಡ್‌ ವಿಮಾನ ಏರಲು ತೆರಳುತ್ತಿದ್ದಾಗ ಭದ್ರತಾ ತಪಾಸಣಾ ಕೇಂದ್ರಗಳಲ್ಲಿ ಅಧಿಕಾರಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಇದರಿಂದಾಗಿ ಸುನೀಲ್‌ ಗಾಯಕ್‌ವಾಡ್‌ ಕಿರಿಕಿರಿ ಎದುರಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News