ವಿನೋದ್ ಖನ್ನಾಗೆ ಕ್ಯಾನ್ಸರ್ ?
ಮುಂಬೈ, ಎ. 6 : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಬಾಲಿವುಡ್ ನಟ ವಿನೋದ್ ಖನ್ನಾ ಅವರು ಮೂತ್ರಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂದು ಹೇಳಲಾಗುತ್ತಿದೆ. ನಟನ ಕುಟುಂಬ ಈ ಸುದ್ದಿಯನ್ನು ಇನ್ನಷ್ಟೇ ದೃಢೀಕರಿಸಬೇಕಾದರೂ ಇಂದು ವೈರಲ್ ಆಗಿರುವ ಫೋಟೋವೊಂದರಲ್ಲಿ ತೀರಾ ಬಸವಳಿದು ಹೋಗಿರುವ ಖನ್ನಾ ತನ್ನ ಕುಟುಂಬ ಸದಸ್ಯರೊಂದಿಗೆ ನಿಂತಿರುವುದನ್ನು ಕಾಣಬಹುದಾಗಿದೆ. ಚಿತ್ರದಲ್ಲಿ ವಿನೋದ್ ಖನ್ನಾ ಆಸ್ಪತ್ರೆಯ ಬಟ್ಟೆಯಲ್ಲಿದ್ದು ಅವರನ್ನು ಗುರುತಿಸುವುದು ಕಷ್ಟಕರವಾಗಿದೆ. ಕಳೆದ ಫೆಬ್ರವರಿಯಲ್ಲಿ ನಟ ತಾನು ಕರೆದ ಪತ್ರಿಕಾ ಗೋಷ್ಠಿಯೊಂದರಲ್ಲಿ ತಮಗೆ ಕ್ಯಾನ್ಸ್ಸರ್ ಇರುವುದಾಗಿ ಹಾಗೂ ತಾನು ಗುಣಮುಖನಾಗುತ್ತಿರುವುದಾಗಿ ಹೇಳಿದ್ದರೆಂದು ಕೆಲ ಹಿಂದಿ ವೆಬ್ ತಾಣಗಳು ವರದಿ ಮಾಡಿವೆ.
ಈ ಫೋಟೋ ನೋಡಿ ವಿನೋದ್ ಖನ್ನಾ ಅಭಿಮಾನಿಗಳಿಗೆ ಆಘಾತವಾಗಿದ್ದು ನಟ ಶೀಘ್ರ ಗುಣಮುಖರಾಗಲಿ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸಿದ್ದಾರೆ. ವಿನೋದ್ ಖನ್ನಾ ಅವರು ದಾಖಲಾಗಿರುವ ಆಸ್ಪತ್ರೆಯ ಆಡಳಿತ ಕೂಡ ಏನನ್ನೂ ಹೇಳಲು ನಿರಾಕರಿಸಿದ್ದು ನಟನ ಆರೋಗ್ಯ ಸ್ಥಿರವಾಗಿದ್ದು ಅವರು ಗುಣಮುಖರಾಗುತ್ತಿದ್ದಾರೆ ಎಂದಷ್ಟೇ ಹೇಳಿದೆ.
ಗುರುದಾಸಪುರ ಕ್ಷೇತ್ರದ ಸಂಸದರೂ ಆಗಿರುವ ಖನ್ನಾ ಅವರನ್ನು ಕಳೆದ ಶುಕ್ರವಾರ ಮುಂಬೈ ಉಪನಗರಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರ ಪುತ್ರ ರಾಹುಲ್ ಖನ್ನಾ ಮಾತ್ರ ತಮ್ಮ ತಂದೆ ತೀವ್ರ ಡಿಹೈಡ್ರೇಶನ್ ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ವೈದ್ಯರು ಶೀಘ್ರದಲ್ಲಿಯೇ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದೂ ಖನ್ನಾ ಹೇಳಿದ್ದಾರೆ.