ಹಿಮಪಾತದಲ್ಲಿ ಸಿಲುಕಿದ್ದ ಇಬ್ಬರು ಯೋಧರು ಹುತಾತ್ಮ
Update: 2017-04-07 09:11 IST
ಹೊಸದಿಲ್ಲಿ, ಎ.7: ಜಮ್ಮು ಮತ್ತು ಕಾಶ್ಮೀರದ ಬತಾಲಿಕ್‌ನಲ್ಲಿ ತೀವ್ರ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೂವರು ಸೈನಿಕರ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮತ್ತೊಬ್ಬ ಸೈನಿಕನ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.
ಲಡಾಕ್ ಜಿಲ್ಲೆಯ ಬತಾಲಿಕ್‌ನಲ್ಲಿ ಗುರುವಾರ ಭಾರೀ ಹಿಮಪಾತ ಸಂಭವಿಸಿದಾಗ ಐದು ಮಂದಿ ಸೈನಿಕರು ಅಲ್ಲಿದ್ದರು. ಈ ಪೈಕಿ ಇಬ್ಬರನ್ನು ಪಾರು ಮಾಡಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಪರಿಣಾಮವಾಗಿ ಬಯಲು ಪ್ರದೇಶದಲ್ಲಿ ವ್ಯಾಪಕ ಹಿಮಪಾತ ಆಗಿತ್ತು. ಇದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣಿವೆಯ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಕಳೆದ ಜನವರಿ 26ರಂದು ಕಾಶ್ಮೀರದ ಬಂಡೀಪುರ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಮಂದಿ ಸೈನಿಕರು ಜೀವ ಕಳೆದುಕೊಂಡಿದ್ದರು.