ಸಚಿವ ವಿಜಯ್ ಭಾಸ್ಕರ್, ನಟ ಶರತ್‌ಕುಮಾರ್ ಮನೆ ಮೇಲೆ ಐಟಿ ದಾಳಿ
ಚೆನ್ನೈ, ಎ.6: ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯ್ ಭಾಸ್ಕರ್ ಹಾಗೂ ನಟ ಶರತ್‌ಕುಮಾರ್ ಮನೆ ಮೇಲೆ ಶುಕ್ರವಾರ ಬೆಳಗ್ಗಿನ ಜಾವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆೆ. ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗಿನ ಜಾವ ಐಟಿ ಅಧಿಕಾರಿಗಳು ಚೆನ್ನೈನಲ್ಲಿರುವ ಶರತ್ ಕುಮಾರ್ ಹಾಗೂ ವಿಜಯ್ಭಾಸ್ಕರ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಒಟ್ಟು 34 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಎ.12 ರಂದು ನಡೆಯಲಿರುವ ಆರ್‌ಕೆ ನಗರ ಉಪ ಚುನಾವಣೆಯಲ್ಲಿ ವಿಕೆ ಶಶಿಕಲಾ ಬಣದ ಎಐಎಡಿಎಂಕೆ ಅಮ್ಮಾ ಪಕ್ಷಕ್ಕೆ ಮತ ನೀಡುವಂತೆ ಮತದಾರರಿಗೆ ವ್ಯಕ್ತಿಯೊಬ್ಬ ಹಣ ಹಂಚುವ ವಿಡಿಯೋವೊಂದು ಬಹಿರಂಗವಾದ ಬಳಿಕ ಎಚ್ಚೆತ್ತುಕೊಂಡಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರ್.ಕೆ. ನಗರ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆಯಲ್ಲಿ ವಿಜಯ್ ಭಾಸ್ಕರ್ ಮುಖ್ಯ ಪಾತ್ರವಹಿಸಿದ್ದಾರೆ. ಈ ಉಪ ಚುನಾವಣೆಯು ಎಐಎಡಿಎಂಕೆಯ ಎರಡು ಬಣಗಳಿಗೆ ಪ್ರತಿಷ್ಠಿತ ವಿಷಯವಾಗಿ ಪರಿಗಣಮಿಸಿದೆ.