ದೇವಸ್ಥಾನದಲ್ಲಿ ದೇವಿಯ ಖಡ್ಗದಿಂದ ವ್ಯಕ್ತಿಯನ್ನು ಕೊಚ್ಚಿ ಬರ್ಬರ ಹತ್ಯೆ
ಹೊಸದಿಲ್ಲಿ,ಎ.7: ದಕ್ಷಿಣ ದಿಲ್ಲಿಯ ಅಂಬೇಡ್ಕರ್ ನಗರದ ದೇವಸ್ಥಾನವೊಂದರಲ್ಲಿ ಗುರುವಾರ ರಾತ್ರಿ ನಾಲ್ವರು ದುಷ್ಕರ್ಮಿಗಳ ಗುಂಪೊಂದು 30ರ ಹರೆಯದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಹಂತಕರು ದೇವಿಯ ಮೂರ್ತಿಯ ಬಳಿಯಲ್ಲಿದ್ದ ಖಡ್ಗವನ್ನು ಎಳೆದು ಅದರಿಂದಲೇ ಆತನನ್ನು ಕೊಚ್ಚಿದ್ದಾರೆ. ಜೊತೆಗೆ ತಾವು ತಂದಿದ್ದ ಚೂರಿಗಳಿಂದ 14 ಬಾರಿ ಇರಿದಿದ್ದು, ಆತ ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದಾನೆ.
ಪೆರುಮಾಳ್ ಕೊಲೆಯಾಗಿರುವ ವ್ಯಕ್ತಿ. ಆತನ ಪತ್ನಿಯ ಕಣ್ಣೆದುರೇ ಈ ಹತ್ಯೆ ನಡೆದಿದೆ. ಆಕೆಯನ್ನೂ ಹಂತಕರು ಥಳಿಸಿದ್ದಾರೆ.
ಹತ್ಯೆ ಆರೋಪಿಗಳು ಮತ್ತು ಕೊಲೆಯಾದ ಪೆರುಮಾಳ್ ದಕ್ಷಿಣಪುರಿ ಬಡಾವಣೆಯ ನಿವಾಸಿಗಳಾಗಿದ್ದು, ಎಲ್ಲರೂ ತಮಿಳುನಾಡಿನವರಾಗಿದ್ದಾರೆ. ಬದುಕಿಗಾಗಿ ಚಿಲ್ಲರೆ ಕೆಲಸಗಳನ್ನು ಮಾಡಿಕೊಂಡಿದ್ದಾರೆ.
ಪೆರುಮಾಳ್ ಮತ್ತು ನಾಲ್ವರು ಆರೋಪಿಗಳ ನಡುವೆ ಈ ಹಿಂದೆ ಜಗಳ, ಹೊಡೆದಾಟಗಳು ನಡೆದಿದ್ದು, ಆಗೆಲ್ಲ ಪರಿಸ್ಥಿತಿ ಕೈಮೀರದಂತೆ ಸ್ಥಳೀಯರು ಮಧ್ಯಪ್ರವೇಶಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ಪೆರುಮಾಳ್ ತನ್ನ ಪತ್ನಿ ಮತ್ತು ಸ್ನೇಹಿತನ ಜೊತೆ ದೇವಸ್ಥಾನದಲ್ಲಿದ್ದಾಗ, ಆರೋಪಿಗಳೂ ಅಲ್ಲಿಗೆ ಬಂದಿದ್ದರು. ಈ ವೇಳೆ ಆರೋಪಿಗಳ ಪೈಕಿ ಓರ್ವ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪೆರುಮಾಳ್‌ನ ಸ್ನೇಹಿತನನ್ನು ಕೆಣಕಿದ್ದ. ಇದು ಅವರಿಬ್ಬರ ನಡುವೆ ಹೊಡೆದಾಟಕ್ಕೆ ಕಾರಣವಾಗಿದ್ದು, ಜಗಳ ಬಿಡಿಸಲು ಪೆರುಮಾಳ್ ಮಧ್ಯಪ್ರವೇಶಿಸಿದ್ದ. ಬಳಿಕ ನಡೆದ ಹಿಂಸಾಚಾರದಲ್ಲಿ ಪೆರುಮಾಳ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುವುಷ್ಟರಲ್ಲಿ ಹಂತಕರು ಅಲ್ಲಿಂದ ಪರಾರಿಯಾಗಿದ್ದರು.
ಪೆರುಮಾಳ್‌ನ ಪತ್ನಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರ್.ಶ್ರೀನಿವಾಸ, ಆರ್.ಶೇಖರ ಮತ್ತು ಆರ್.ನಟೇಶನ್ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ.