ಪಾಕ್‌ಗೆ ‘ದಂಗಲ್’ ನಿರಾಕರಿಸಿದ ಆಮಿರ್

Update: 2017-04-07 18:40 GMT

ಭಾರತದ ರಾಷ್ಟ್ರಗೀತೆ ಹಾಗೂ ಭಾರತೀಯ ಧ್ವಜ ಪ್ರದರ್ಶನ ಇರುವ ದೃಶ್ಯಕ್ಕೆ ಕತ್ತರಿ ಹಾಕಿದಲ್ಲಿ ಮಾತ್ರ ಪಾಕಿಸ್ತಾನದಲ್ಲಿ ‘ದಂಗಲ್’ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಾಗಿ ಅಲ್ಲಿನ ಸೆನ್ಸಾರ್ ಮಂಡಳಿ ವಿಧಿಸಿರುವ ಷರತ್ತಿಗೆ ಖ್ಯಾತ ಬಾಲಿವುಡ್ ನಟ, ನಿರ್ಮಾಪಕ ಆಮಿರ್ ಖಾನ್ ನಿರಾಕರಿಸುವ ಮೂಲಕ ಅಪೂರ್ವ ರಾಷ್ಟ್ರಪ್ರೇಮ ಮೆರೆದಿದ್ದಾರೆ.

ಕಳೆದ ವರ್ಷ ಉರಿ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಿತ್ರರಂಗದಿಂದ ನಿಷೇಧಿಸುವ ನಿರ್ಧಾರವನ್ನು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಥಿಯೇಟರ್ ಮಾಲಕರು ತಾತ್ಕಾಲಿಕವಾಗಿ ಭಾರತದ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿದ್ದರು.

ಆದರೆ ಈ ವರ್ಷಾರಂಭದಲ್ಲಿ ಪಾಕಿಸ್ತಾನ ಈ ನಿಷೇಧವನ್ನು ರದ್ದುಪಡಿಸಿ, ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇತ್ತೀಚೆಗೆ ನೆರೆ ರಾಷ್ಟ್ರದ ಕೆಲ ಸ್ಥಳೀಯ ವಿತರಕರು ‘ದಂಗಲ್’ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಆಮಿರ್‌ಖಾನ್ ಸಮ್ಮತಿ ಸೂಚಿಸಿದ್ದರು. ಪಾಕಿಸ್ತಾನಿ ನಾಗರಿಕರು ಹಿಂದಿ ಚಿತ್ರ ಹಾಗೂ ಭಾರತೀಯ ನಟರನ್ನು ಇಷ್ಟಪಡುವ ಹಿನ್ನೆಲೆಯಲ್ಲಿ ಇದಕ್ಕೆ ಸಮ್ಮತಿ ಸೂಚಿಸಿದ್ದರು. ಇಷ್ಟಾಗಿಯೂ ಚಿತ್ರ ಅಲ್ಲಿ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣ ಹುಡುಕಿ ಹೊರಟ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿದು ಬಂದ ಅಂಶವೆಂದರೆ, ಚಿತ್ರದ ಎರಡು ದೃಶ್ಯ ಹೊರತುಪಡಿಸಿ ಪಾಕಿಸ್ತಾನಿ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿತ್ತು. ಒಂದು ದೃಶ್ಯದಲ್ಲಿ ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಲಾಗಿದ್ದರೆ, ಮತ್ತೊಂದು ದೃಶ್ಯದಲ್ಲಿ ಗೀತಾ ಫೊಗತ್ ಚಿನ್ನದ ಪದಕ ಗೆದ್ದ ಬಳಿಕ ಭಾರತದ ರಾಷ್ಟ್ರಗೀತೆ ನುಡಿಸಲಾಗಿತ್ತು. ಈ ಎರಡು ದೃಶ್ಯಗಳನ್ನು ಕಿತ್ತುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಆದರೆ ಇದಕ್ಕೆ ಆಮಿರ್ ಖಾನ್ ನಿರಾಕರಿಸಿದ್ದೇ ಚಿತ್ರ ಬಿಡುಗಡೆಯಾಗದಿರಲು ಕಾರಣ.

ಪಾಕಿಸ್ತಾನದ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವ ಉಲ್ಲೇಖವೂ ಚಿತ್ರದಲ್ಲಿಲ್ಲ; ಈ ಚಿತ್ರ ಸಂಪೂರ್ಣವಾಗಿ ಕ್ರೀಡಾ ವ್ಯಕ್ತಿಚಿತ್ರವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆ ದೃಶ್ಯ ಕಿತ್ತುಹಾಕಲು ಆಮಿರ್ ಖಾನ್ ಒಪ್ಪಿಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News