ಬಿಡುಗಡೆಗೆ ಮುನ್ನವೇ ಬಾಹುಬಲಿ- 2 ಭಾರೀ ದಾಖಲೆ

Update: 2017-04-08 06:29 GMT

ಹೈದರಾಬಾದ್, ಎ.8: ಬಿಡುಗಡೆಗೆ ಮುನ್ನವೇ ಎಸ್.ಎಸ್.ರಾಜಮೌಳಿಯವರ ಬಾಹುಬಲಿ-2: ದಿ ಕಂಕ್ಲೂಶನ್ ಭಾರೀ ನಿರೀಕ್ಷೆಗಳನ್ನು ಹುಟ್ಟಿಸಿದೆಯಲ್ಲದೆ, ಈಗಾಗಲೇ ಎರಡು ಭಾರೀ ದಾಖಲೆಗಳನ್ನು ಕೂಡ ಸೃಷ್ಟಿಸಿದೆ. ಈ ಚಿತ್ರದ ಮೊದಲ ಭಾಗ 2015ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ ರೂ.500 ಕೋಟಿಗೂ ಅಧಿಕ ಮೊತ್ತ ಬಾಚಿದ್ದರೆ, ಇದೀಗ ಬಾಹುಬಲಿ -2 ಅದನ್ನೂ ಮೀರಿಸಬಹುದೆಂದು ಅಂದಾಜಿಸಲಾಗಿದೆ.

ಈ 250 ಕೋ.ರೂ. ಬಜೆಟ್ ಚಿತ್ರವು ವಿಶ್ವದಾದ್ಯಂತ ದಾಖಲೆ 6,500 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದ್ದು, ತೆಲುಗು ಹೊರತಾಗಿ, ಹಿಂದಿ, ತಮಿಳು ಮತ್ತು ಮಲಯಾಳಂ ಅವತರಣಿಕೆಗಳಲ್ಲೂ ತೆರೆ ಕಾಣಲಿದೆ. ಸಾಮಾನ್ಯವಾಗಿ ದೊಡ್ಡ ಬಜೆಟ್ ಬಾಲಿವುಡ್ ಚಿತ್ರ ಕೂಡ ಹೆಚ್ಚೆಂದರೆ 4,500 ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತದೆ. ಮೇಲಾಗಿ ಚಿತ್ರ ತಯಾರಿ ವೆಚ್ಚವನ್ನು ಅದರ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ ವರ್ಕ್ಸ್ ಈಗಾಗಲೇ ಚಿತ್ರದ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಮರಳಿ ಪಡೆದುಕೊಂಡಿದ್ದಾರಲ್ಲದೆ, ಚಿತ್ರವು ವಿದೇಶಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಹಕ್ಕು ಮಾರಾಟದ ಮೂಲಕ ಮತ್ತೆ ಹೆಚ್ಚುವರಿ ರೂ.100 ಕೋಟಿ ಸಂಪಾದಿಸಲಿದೆ. ಚಿತ್ರಕ್ಕೆ ಹೂಡಿಕೆ ಮಾಡಿದ ಹಣ ಈಗಾಗಲೇ ಹಿಂದಕ್ಕೆ ಬಂದಿರುವುದರಿಂದ ಹಾಗೂ ಸ್ಯಾಟ್ ಲೈಟ್ ಟೆಲಿವಿಷನ್ ಹಕ್ಕುಗಳ ಮಾರಾಟ ಮೂಲಕ ಅದು ರೂ.78 ಕೋಟಿ ಗಳಿಸಿರುವುದರಿಂದ ಬಿಡುಗಡೆಗೆ ಮುನ್ನವೇ ಲಾಭ ಗಳಿಸಿದೆಯೆಂದೇ ಹೇಳಬಹುದು.

ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಬಾಹುಬಲಿ-2 ಹಿಂದಿ ಅವತರಣಿಕೆಯ ಹಕ್ಕುಗಳನ್ನು ರೂ.50 ಕೋಟಿಗೆ ಪಡೆದಿದ್ದರೆ, ಸ್ಟಾರ್ ಇಂಡಿಯಾ ರೂ.28 ಕೊಟಿ ಮೊತ್ತವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಅವತರಣಿಕೆಗಳಿಗೆ ನೀಡಿದೆ.

ಬಾಹುಬಲಿ ನಿರ್ಮಾಪಕರು ಗ್ರಾಫಿಕ್ ಇಂಡಿಯಾ ಜತೆ ಚಿತ್ರಕಥೆಯ ಕಾಮಿಕ್ ಪುಸ್ತಕ, ಕಾದಂಬರಿ ಹಾಗೂ ವೀಡಿಯೋ ಗೇಮ್ಸ್ ಕುರಿತಂತೆ ಒಪ್ಪಂದ ಮಾಡಿಕೊಂಡಿರುವುದರಿಂದ ಅದರಿಂದ ರೂ.10 ಕೋಟಿ ಆದಾಯ ಗಳಿಸುವ ಸಾಧ್ಯತೆಯಿದೆ. ಚಿತ್ರ ತೆರೆಕಂಡ ಮೊದಲ ದಿನವೇ ರೂ.100 ಕೋಟಿ ಬಾಚುವ ನಿರೀಕ್ಷೆಯಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News