ಮತಾಂತರದ ಆರೋಪ ಮಾಡಿದ ಆದಿತ್ಯನಾಥ್ ರ ಸಂಘಟನೆ
Update: 2017-04-08 12:04 IST
ಲಕ್ನೋ, ಎ.8: ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿನ ಚರ್ಚ್ ಒಂದರಲ್ಲಿ ಬಲವಂತದ ಮತಾಂತರಗಳು ನಡೆಯುತ್ತಿವೆಯೆಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದ ಸ್ಥಾಪಿತವಾಗಿರುವ ಹಿಂದೂ ಯುವ ವಾಹಿನಿ ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ಅಮೇರಿಕನ್ ಪ್ರವಾಸಿಗರೂ ಸೇರಿದಂತೆ ಸುಮಾರು 100ಕ್ಕೂ ಅಧಿಕ ಜನರು ಸಲ್ಲಿಸುತ್ತಿದ್ದ ಪ್ರಾರ್ಥನೆಯನ್ನು ಪೊಲೀಸರು ನಿಲ್ಲಿಸಿದ ಘಟನೆ ನಡೆದಿದೆ.
ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಯುವವಾಹಿನಿ ದೂರಿದ್ದರೆ ಚರ್ಚಿನ ಪ್ಯಾಸ್ಟರ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ತನಿಖೆಯ ವೇಳೆ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂದು ಪೊಲೀಸರು ಪತ್ತೆ ಹಚ್ಚಿದ್ದು, ದಾಖಲೆಗಳನ್ನು ಪರಿಶೀಲಿಸಿ ಚರ್ಚಿನಲ್ಲಿದ್ದ ವಿದೇಶೀಯರನ್ನು ಬಿಡುಗಡೆಗೊಳಿಸಿದ್ದಾರೆ.
ಬ್ರಿಟಿಷರ ಕಾಲದ ಚರ್ಚಿನ ಮೇಲೆ ಇಂತಹ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲ ಬಾರಿಯಾಗಿದೆ.