ಬಾಹುಬಲಿ1ನಿರ್ಮಾಪಕರಿಗೆ ಲಾಭ ತಂದಿಲ್ವಂತೆ!

Update: 2017-04-08 15:59 GMT

ಭಾರತೀಯ ಚಿತ್ರರಸಿಕರ ಬಹುದಿನಗಳ ಕಾತರ ಎಪ್ರಿಲ್‌ನಲ್ಲಿ ಅಂತ್ಯಗೊಳ್ಳಲಿದೆ.ರಾಜವೌಳಿ ನಿರ್ದೇಶನದ ‘ಬಾಹುಬಲಿ 2’ ವಿಶ್ವದಾದ್ಯಂತ 6,500 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದ್ದು, ಹಿಂದಿನ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ನುಚ್ಚುನೂರು ಮಾಡಲು ಸಜ್ಜಾಗಿದೆ.

ಬಾಹುಬಲಿ 2 ಬಗ್ಗೆ ಭಾರೀ ಕ್ರೇಝ್ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿಯೇ, ಚಿತ್ರದ ಮೊದಲ ಭಾಗವು ವಾಸ್ತವಿಕವಾಗಿ ನಿರ್ಮಾಪಕರಿಗೆ ಯಾವುದೇ ಲಾಭ ತಂದುಕೊಟ್ಟಿಲ್ಲವೆಂಬ ಸ್ವಾರಸ್ಯಕರ ಸಂಗತಿಯೊಂದು ಈಗ ಬಯಲಾಗಿದೆ. ಇದಕ್ಕೆ ಕಾರಣವೂ ಇದೆ. ಆದರೆ ಅದರಿಂದ ನಿರ್ಮಾಪಕರಿಗೆ ಲಾಭ ಬಂದಿಲ್ಲವೆಂಬುದಕ್ಕೆ ಚಿತ್ರ ವಿತರಕ ಆಕ್ಷಯ್ ರಥಿ ಕಾರಣ ನೀಡಿದ್ದಾರೆ.

ಬಾಹುಬಲಿ 1 ಬಾಕ್ಸ್‌ಆಫೀಸ್‌ನಲ್ಲಿ 600 ಕೋಟಿ ರೂ. ಸಂಪಾದಿಸಿದ್ದೇನೂ ಹೌದು. ಆದರೆ ಅದರ ನಿರ್ಮಾಣವೆಚ್ಚ ಹಾಗೂ ಮಾರ್ಕೆಟಿಂಗ್ ವೆಚ್ಚವು ಸುಮಾರು 450 ಕೋಟಿ ರೂ.ನ ಆಸುಪಾಸಿನಲ್ಲಿತ್ತು. ಇದರ ಜೊತೆಗೆ ಬಾಹುಬಲಿ ಎರಡನೆ ಭಾಗದ ಚಿತ್ರೀಕರಣ ಕೂಡಾ ನಡೆಸಲಾಗಿತ್ತು. ಅದರ ಸೆಟ್‌ಗಳು ಹಾಗೂ ಲೋಕೇಶನ್‌ಗಳಿಗಾಗಿಯೂ ನಿರ್ಮಾಪಕರು ವಿಪರೀತ ಖರ್ಚು ಮಾಡಿದ್ದಾರೆ.

ಬಾಹುಬಲಿ ಮೊದಲ ಭಾಗದ ಬಿಡುಗಡೆಗೆ ಮೊದಲೇ ನಿರ್ಮಾಪಕರು ಎರಡನೆ ಭಾಗದ ಮಹತ್ವದ ಭಾಗಗಳನ್ನೂ ಚಿತ್ರೀಕರಿಸಿದ್ದರು. ಹೀಗಾಗಿ ನಿರ್ಮಾಣ ವೆಚ್ಚವು 600 ಕೋಟಿ ರೂ. ದಾಟಿತ್ತು. ಹೀಗಾಗಿ ಬಾಹುಬಲಿ ನಿರ್ಮಾಪಕರಿಗೆ ಲಾಭ ಬರುವುದಿದ್ದರೆ ಅದು ಬಾಹುಬಲಿ 2ನಿಂದಲೇ ಬರಬೇಕಾಗಿದೆಯೆಂದು ಅಕ್ಷಯ್‌ರಥಿ ಅವರ ಅಂಬೋಣ. ಆದಾಗ್ಯೂ ಈ ಎರಡೂ ಚಿತ್ರಗಳ ಥಿಯೇಟರ್ ಪ್ರದರ್ಶನದ ಹಕ್ಕುಗಳ ಮಾರಾಟದಿಂದ ನಿರ್ಮಾಪಕರು 600 ಕೋಟಿ ರೂ. ಸಂಪಾದಿಸಿದ್ದಾರೆ. ಹೀಗಾಗಿ ನಿರ್ಮಾಪಕರು, ಈ ಎರಡು ಚಿತ್ರಗಳಿಂದ ಒಟ್ಟು 150 ರಿಂದ 200 ಕೋಟಿ ರೂ.ವರೆಗೆ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿಯೇ ಬಾಹುಬಲಿ 2 ಟ್ರೆಂಡ್‌ಸೆಟ್ಟರ್ ಆಗಲಿದೆಯೆಂಬ ನಿರೀಕ್ಷೆಯನ್ನು ಅಕ್ಷಯ್ ಹೊಂದಿದ್ದಾರೆ. ‘‘ ಬಾಹುಬಲಿಯನ್ನು ಅತ್ಯಂತ ಲೆಕ್ಕಾಚಾರದ ರಿಸ್ಕ್ ನೊಂದಿಗೆ ಸೃಷ್ಟಿಸಲಾಗಿದೆ’’ ಎಂದವರು ಹೇಳಿದ್ದಾರೆ. ಮೊದಲ ಭಾಗದ ಬಹುತೇಕ ಪಾತ್ರಗಳು ಬಾಹುಬಲಿ 2ನಲ್ಲಿಯೂ ಮುಂದುವರಿದಿದೆ. ಪ್ರಭಾಸ್, ರಾಣಾದುಗ್ಗುಬಾಟಿ, ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News