ಸದ್ದು ಮಾಡಿದ ವಿಲನ್ ಫಸ್ಟ್‌ಲುಕ್

Update: 2017-04-08 16:10 GMT

ಸ್ಯಾಂಡಲ್‌ವುಡ್‌ನಲ್ಲೀಗ ‘ವಿಲನ್’ನದ್ದೇ ಹವಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯ ಜುಗಲ್‌ಬಂದಿಯಿರುವ ವಿಲನ್ ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಸಿಕರನ್ನು ಪುಳಕಿತಗೊಳಿಸಿದೆ. 

ಆರು ವರ್ಷಗಳ ಸುದೀರ್ಘ ಅಂತರದ ಬಳಿಕ ‘ಜೋಗಿ’ ಪ್ರೇಮ್ ನಿರ್ದೇಶಿಸುತ್ತಿರುವ ವಿಲನ್, ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳಲಿದೆ. ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಶ್ರುತಿ ಹರಿಹರನ್ ನಟಿಸಲಿದ್ದು, ಸುದೀಪ್‌ಗೆ ಹಿರೋಯಿನ್ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ವಿಲನ್ ಫಸ್ಟ್‌ಲುಕ್‌ನಲ್ಲಿ ಕಿಚ್ಚನ ನೀಲಿ ಕಣ್ಣುಗಳು ಹಾಗೂ ಶಿವರಾಜ್ ಅವರ ವಿಶಿಷ್ಟವಾದ ವಿಗ್, ಚಿತ್ರರಸಿಕರಲ್ಲಿ ಕ್ರೇಝ್ ಸೃಷ್ಟಿಸಿದೆ.

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕೂಡಾ ವಿಲನ್‌ನಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದೊಂದಿಗೆ ತೆಲುಗಿನ ಜನಪ್ರಿಯ ನಟ ಶ್ರೀಕಾಂತ್ ಬಹಳ ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಪುನರಾಗಮಿಸಿದ್ದಾರೆ. ಮೂಲತಃ ಕನ್ನಡಿಗರೇ ಆದ ಶ್ರೀಕಾಂತ್ ತೆಲುಗಿನಲ್ಲಿ ಸ್ಟಾರ್‌ನಟನಾಗಿ ಮೆರೆದವರು.

ರವಿಚಂದ್ರನ್ ಅಭಿನಯದ ‘ಯುಗಾದಿ’ ಅವರ ಅಭಿನಯದ ಕೊನೆಯ ಕನ್ನಡ ಚಿತ್ರವಾಗಿತ್ತು. ‘ವಿಲನ್’ನಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಸಿ.ಆರ್. ಮನೋಹರ್ ಹಾಗೂ ಗೋಪಿ ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಎಪ್ರಿಲ್ ಅಂತ್ಯದ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News