ರಾಮ ಮಂದಿರಕ್ಕಾಗಿ ಜೈಲಿಗೆ ಹೋಗಲು, ನೇಣು ಹಾಕಿಕೊಳ್ಳಲೂ ಸಿದ್ಧ: ಉಮಾ ಭಾರತಿ
ಲಕ್ನೋ,ಎ.8: ಅಯೋಧ್ಯೆಯಲ್ಲಿ ರಾಮಮಂದಿರವು ತನ್ನ ಪಾಲಿಗೆ ನಂಬಿಕೆಯ ವಿಷಯವಾಗಿದೆ ಮತ್ತು ಅದಕ್ಕಾಗಿ ತಾನು ಜೈಲಿಗೆ ಹೋಗಲೂ ಸಿದ್ಧ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಶನಿವಾರ ಒತ್ತಿ ಹೇಳಿದರು.
ರಾಮ ಮಂದಿರವು ತನ್ನ ಪಾಲಿಗೆ ನಂಬಿಕೆಯ ವಿಷಯವಾಗಿದೆ ಮತ್ತು ಆ ಬಗ್ಗೆ ತನಗೆ ತೀವ್ರ ಹೆಮ್ಮೆಯಿದೆ. ಅದಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ,ತಾನೇ ನೇಣು ಹಾಕಿಕೊಳ್ಳಲೂ ಸಿದ್ಧ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಭಾರತಿ ತಿಳಿಸಿದರು.
ಆದಿತ್ಯನಾಥ ಜೊತೆ ಮಾತುಕತೆ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯವು ಪ್ರಸ್ತಾಪಗೊಂಡಿತ್ತೇ ಎಂಬ ಪ್ರಶ್ನೆಗೆ, ‘‘ನಾವು ರಾಮಮಂದಿರ ಕುರಿತು ಮಾತನಾಡುವ ಅಗತ್ಯವಿಲ್ಲ. ಈ ವಿಷಯದಲ್ಲಿ ನಾನು ಮತ್ತು ಆದಿತ್ಯನಾಥ ಅಪರಿಚಿತರಲ್ಲ. ಆದಿತ್ಯನಾಥರ ಗುರು ಮಹಂತ ಅವೈದ್ಯನಾಥ ಅವರು ಮಂದಿರ ನಿರ್ಮಾಣ ಆಂದೋಲನದ ನಾಯಕರಾಗಿದ್ದರು’’ ಎಂದು ಅವರು ಉತ್ತರಿಸಿದರು.
ವಿಷಯವು ಸರ್ವೋಚ್ಚ ನ್ಯಾಯಾಲಯದಲಿ ವಿಚಾರಣೆಗೆ ಬಾಕಿಯಿರುವುದರಿಂದ ಆ ಬಗ್ಗೆ ಹೆಚ್ಚು ಮಾತನಾಡಲು ತಾನು ಬಯಸುವುದಿಲ್ಲ, ಆದರೆ ಈ ವಿಷಯವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ ಎಂದು ಬೆಟ್ಟು ಮಾಡಿದರು.