ದಾಖಲೆ ಮುರಿದ ದಿ ಗ್ರೇಟ್ ಫಾದರ್

Update: 2017-04-08 16:28 GMT

ಮಲಯಾಳಂ ಚಿತ್ರರಂಗದಲ್ಲಿ ಈಗ ಎಲ್ಲರೂ ಮೆಗಾಸ್ಟಾರ್ ಮಮುಟ್ಟಿ ಅಭಿನಯದ ‘ದಿ ಗ್ರೇಟ್ ಫಾದರ್’ನ ಭರ್ಜರಿ ಯಶಸ್ಸಿನ ಬಗ್ಗೆಯೇ ಮಾತ ನಾಡಿಕೊಳ್ಳುತ್ತಿದ್ದಾರೆ. ಗುರುವಾರ ತೆರೆಕಂಡ ಈ ಚಿತ್ರ ಮೊದಲ ದಿನದ ಪ್ರದರ್ಶನದಲ್ಲೇ ಬರೋಬ್ಬರಿ 4.31 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಸ್ಥಾಪಿಸಿದೆ. 

ಇದರೊಂದಿಗೆ ಮೋಹನ್‌ಲಾಲ್ ಅಭಿನಯದ ಪುಲಿಮುರುಗನ್‌ನ 4.08 ಕೋಟಿ ರೂ. ಓಪನಿಂಗ್ ಡೇ ಕಲೆಕ್ಷನ್‌ನ ದಾಖಲೆಯನ್ನು ಮುರಿದು ಹಾಕಿದೆ. ಕೇರಳಾದ್ಯಂತ 202 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಗ್ರೇಟ್‌ಫಾದರ್‌ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಸ್ಥಾಪಿಸುವ ಸನ್ನಾಹದಲ್ಲಿದೆ.

ಗ್ರೇಟ್‌ಫಾದರ್‌ನ ಗೆಲುವಿನ ನಾಗಾಲೋಟ ಮುಂದುವರಿದಲ್ಲಿ ಚಿತ್ರವು ಶೀಘ್ರದಲ್ಲೇ 100 ಕೋಟಿ ರೂ. ಕ್ಲಬ್ ಪ್ರವೇಶಿಸುವ ದಿನಗಳು ದೂರವಿಲ್ಲವೆಂದು ಚಿತ್ರಪಂಡಿತರ ಅಭಿಪ್ರಾಯವಾಗಿದೆ. ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರವೆಸಗಿದವನನ್ನು ಬೇಟೆಯಾಡುವ ನಾಯಕ ಡೇವಿಡ್‌ನ ಪಾತ್ರದಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ನಾಯಕಿಯಾಗಿ ಸ್ನೇಹಾ ಕಾಣಿಸಿಕೊಂಡಿದ್ದಾರೆ.

ಮಮ್ಮುಟ್ಟಿ ಅಭಿನಯದ ಇತ್ತೀಚಿನ ಚಿತ್ರಗಳಾದ ಪುದಿಯ ನಿಯಮಂ, ಕಸಬಾ, ವೈಟ್ ಚಿತ್ರಗಳು ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಇದೀಗ ಗ್ರೇಟ್‌ಫಾದರ್‌ನ ಭರ್ಜರಿ ಗೆಲುವು ಮಮ್ಮಟ್ಟಿ ತಾರಾವರ್ಚಸ್ಸಿಗೆ ಮೆರುಗು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News