ಮುಸ್ತಫಾ ಕೊಟ್ಟ ಉಡುಗೊರೆ!

Update: 2017-04-08 18:44 GMT

ಎರಡನೆ ವರ್ಷಕ್ಕೆ ಕಾಲಿಡುವಷ್ಟರಲ್ಲಿ ಜಾನಕಿ ಹತ್ತು ಹಲವು ಹೊಸ ವಿಷಯಗಳನ್ನು ಕಲಿತಿದ್ದಳು. ಅದರಲ್ಲಿ ಮುಖ್ಯವಾಗಿ ಮುಸ್ತಫಾ ಮತ್ತು ಅವನ ಜಾತಿಯವರ ಕುರಿತಂತೆ. ಆ ಜಾತಿಯವರಲ್ಲಿ ಒಳ್ಳೆಯವರೂ ಇದ್ದಾರೆ ಎನ್ನುವುದು ಮೊದಲ ವರ್ಷದ ಕಲಿಕೆಯ ಸಂದರ್ಭದಲ್ಲಿ ಅವಳು ಮನನ ಮಾಡಿಕೊಂಡ ಬಹುಮುಖ್ಯ ವಿಷಯ.

ಆದರೆ ಮೀನಾಕ್ಷಿ ಮಾತ್ರ ಈ ಬಗ್ಗೆ ತನ್ನ ಅನುಮಾನವನ್ನು ಇಟ್ಟುಕೊಂಡೇ ಇದ್ದಳು. ಪದೇ ಪದೇ ಜಾನಕಿಗೆ ಎಚ್ಚರಿಸುತ್ತಿದ್ದಳು ‘‘ನಮ್ಮ ಜಾಗ್ರತೆಯಲ್ಲಿ ನಾವಿರಬೇಕು...ಅಷ್ಟೇ...’’

ಎರಡನೆ ವರ್ಷದ ಕಲಿಕೆಯ ಸಂದರ್ಭದಲ್ಲಿ ಇಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು. ಪರಸ್ಪರ ನೋಟ್ಸ್ ಪುಸ್ತಕಗಳನ್ನು ಅದಲು ಬದಲು ಮಾಡಿಕೊಳ್ಳುತ್ತಿದ್ದರು. ಒಂದು ದಿನ ಯಾರಿಗೂ ತಿಳಿಯದ ಹಾಗೆ, ಮೀನಾಕ್ಷಿಯ ಜೊತೆಗೆ ಮುಸ್ತಫಾನ ಜವಳಿ ಅಂಗಡಿಗೆ ಹೋಗಿದ್ದಳು. ಅವಳಿಗೆ ಮುಸ್ತಫಾನ ತಂದೆಯನ್ನು ನೋಡಬೇಕು ಎನ್ನುವ ಆಸೆಯಿತ್ತು. ನೋಡಿದರೆ ಎಲ್ಲರಂತೆಯೇ ಇದ್ದಾರೆ. ಪಿಚ್ ಅನ್ನಿಸಿತು. ಪ್ರೀತಿ ಸೂಸುವ ಕಣ್ಣುಗಳು. ಸುಮ್ಮನೆ ಅದು ಇದು ಎಳೆದು ಹಾಕಿ, ಈಗ ಬೇಡ ಮತ್ತೆ ಬರುತ್ತೇವೆ ಎಂದು ವಾಪಸ್ ಬಂದಿದ್ದರು. ಆದರೆ ಈ ಭೇಟಿ ಮೀನಾಕ್ಷಿಗೆ ಇಷ್ಟವೇ ಆಗಿರಲಿಲ್ಲ. ‘‘ಇನ್ನು ಮುಂದೆ ನಿನ್ನ ಜೊತೆ ನಾನಿಲ್ಲ’’ ಎಂದು ಸ್ಪಷ್ಟ ಮಾತಲ್ಲಿ ಹೇಳಿ ಬಿಟ್ಟಿದ್ದಳು.

ಅಂದು ಮುಸ್ತಫಾ ಸಿಕ್ಕಿದಾಗ ಜಾನಕಿ ತುಂಟ ನಗು ನಗುತ್ತಾ ಹೇಳಿದಳು ‘‘ಮುಸ್ತಫಾ...ಇವತ್ತು ನಾವು ಒಂದು ಜವಳಿ ಅಂಗಡಿಗೆ ಹೋಗಿದ್ದೆವು. ಗೊತ್ತುಂಟಾ...’’

ಮುಸ್ತಫಾ ಅವಕ್ಕಾದ. ‘‘ನಿನ್ನ ತಂದೆಯನ್ನು ನೋಡಿದೆ....’’ ಮುಸ್ತಫಾನಿಗೆ ಸಂಕೋಚವಾಯಿತು. ಯಾವ ಧಿರಿಸಿನಲ್ಲಿದ್ದರೋ...ಅಪ್ಪನನ್ನು ನೋಡಿ ಜಾನಕಿಗೆ ಏನನ್ನಿಸಿತೋ...

‘‘ಅಪ್ಪನಿಗೆ ನಿಮ್ಮ ಗುರುತು ಸಿಕ್ಕಿತಾ?’’ ಮುಸ್ತಫಾ ಕೇಳಿದ.

‘‘ಇಲ್ಲ. ನಾವೇನೂ ಗುರುತು ಹೇಳಲಿಲ್ಲ. ವ್ಯಾಪಾರಕ್ಕೆ ಹೋದದ್ದಲ್ಲವಾ? ಒಂದು ಲಕ್ಷದ ವ್ಯಾಪಾರ ಮಾಡಿದೆವು ಗೊತ್ತುಂಟಾ...’’ ಎನ್ನುತ್ತಾ ಜಾನಕಿ ನಕ್ಕಳು. ಮುಸ್ತಫಾ ನಾಚಿದ ‘‘ನಮ್ಮದು ಸಣ್ಣ ಅಂಗಡಿ. ಅಷ್ಟೇನೂ ದೊಡ್ಡದಲ್ಲ....’’

‘‘ನಾನು ನಿನ್ನ ಅಪ್ಪನಿಗೆ ಇಷ್ಟುದ್ದ ಗಡ್ಡ ಇರಬಹುದು ಎಂದು ಭಾವಿಸಿದ್ದೆ...ಅವರು ನನ್ನ ತಂದೆಯ ಹಾಗೆ ಪೇಪರ್ ಓದುತ್ತಾ ಇದ್ದರು. ನಾವು ಹೋದದ್ದೂ ಗೊತ್ತಾಗಲೇ ಇಲ್ಲ ಅವರಿಗೆ...’’

‘‘ಹೌದು. ಅವರಿಗೆ ಪೇಪರ್ ಸಿಕ್ಕಿದರೆ ಗಿರಾಕಿಗಳ ಪರಿವೆಯೇ ಇಲ್ಲ...’’ ಎಂದ ಮುಸ್ತಫಾ. ಮುಸ್ತಫಾ ಎರಡನೆ ವರ್ಷದ ಅವಧಿಯಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಿದ್ದ. ಜಾನಕಿ ಹತ್ತಿರವಾದಂತೆ ಸುಧಾಕರ, ನರೇಶ ಮೊದಲಾದವರಿಂದ ಆದಷ್ಟು ದೂರ ಉಳಿದು ಬಿಡುತ್ತಿದ್ದ.

ನರೇಶ ಒಂದು ದಿನ ಕೇಳಿಯೇ ಬಿಟ್ಟ ‘‘ಓಹೋ...ನೀನು ಪಕ್ಷ ಚೇಂಜ್ ಮಾಡಿದ್ದಾ...?’’

ಮುಸ್ತಫಾ ಸಂಕೋಚದಿಂದ ‘‘ನನಗೆ ಯಾವ ಪಕ್ಷವೂ ಇಲ್ಲ’’ ಎಂದು ಉತ್ತರಿಸಿದ.

‘‘ನಿನಗೆ ಗೊತ್ತಿಲ್ಲ ಅವರ ವಿಷಯ. ಜಾನಕಿಯ ಅಪ್ಪ ಆರೆಸ್ಸೆಸ್‌ನ ದೊಡ್ಡ ಲೀಡರ್. ಅವರಿಗೆ ನಿಮ್ಮವರನ್ನು ಕಂಡರೆ ಆಗುವುದಿಲ್ಲ...ಆ ಜಾನಕಿ ಇದ್ದಾಳಲ್ಲ ಅವಳದೆಲ್ಲ ನಟನೆ....ನಿನ್ನ ಒಳಗಿನ ವಿಷಯ ತಿಳಿಯಲಿಕ್ಕೆ ಅವಳ ನಾಟಕ...’’

ಮುಸ್ತಫಾನಿಗೆ ಅಚ್ಚರಿಯಾಗಿತ್ತು ‘‘ನನ್ನದೇನಿದೆ ಒಳಗಿನ ವಿಷಯ...?’’

‘‘ಅದೆಲ್ಲ ಈಗ ನಿನಗೆ ಗೊತ್ತಾಗುವುದಿಲ್ಲ. ಈ ಹುಡುಗಿಯರ ಸಹವಾಸ ಉಂಟಲ್ಲ ಭಾರೀ ಡೇಂಜರ್...’’ ನರೇಶ ಎಚ್ಚರಿಸಿದ್ದ.

ಆದರೆ ಮುಸ್ತಫಾನಿಗೆ ಆತ ಏನು ಹೇಳುತ್ತಿದ್ದಾನೆ ಎನ್ನುವುದೇ ಅರ್ಥವಾಗಿರಲಿಲ್ಲ.

***

ಎರಡನೆ ವರ್ಷ ಪೂರ್ತಿ ಅಧ್ಯಯನದ ಕಡೆಗೆ ಗಮನ ಹರಿಸಿದ್ದರಿಂದ ಮುಸ್ತಫಾ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಗೆ ಗಮನ ಹರಿಸಿರಲಿಲ್ಲ. ಹೀಗೊಮ್ಮೆ, ಮತ್ತೆ ಅಂತರ್ಕಾಲೇಜು ಸ್ಪರ್ಧೆಯ ಆಗಮನವಾಯಿತು. ಹಲವರು ಭಾಷಣಗಳಿಗೆ ತಮ್ಮ ತಮ್ಮ ಹೆಸರುಗಳನ್ನು ನೀಡಿದರು. ಆದರೆ ಮುಸ್ತಫಾ ಅತ್ತ ತಲೆಯೂ ಹಾಕಿ ನೋಡಲಿಲ್ಲ.

ಜಾನಕಿಗೆ ಅಚ್ಚರಿಯ ಮೇಲೆ ಅಚ್ಚರಿ. ‘‘ಮುಸ್ತಫಾ, ನೀನ್ಯಾಕೆ ಭಾಷಣಕ್ಕೆ ಹೆಸರು ಕೊಡಲಿಲ್ಲ...’’

ಮುಸ್ತಫಾ ವೌನವಾದ. ಸ್ವಲ್ಪ ಹೊತ್ತಿನ ಬಳಿಕ ಹೇಳಿದ ‘‘ಅಪ್ಪ ಹೇಳಿದ್ದರು, ಸುಮ್ಮನೆ ಬೇಡದ ವಿಷಯಕ್ಕೆ ಕೈ ಹಾಕದೆ ಪಾಠದ ಮೇಲೆ ಗಮನ ಕೊಡು ಅಂತ’’

ಜಾನಕಿ ವೌನವಾದಳು. ಅವಳಿಗೆ ಅರ್ಥವಾಯಿತು. ಆದರೂ ಒಳಗೊಳಗೇ ಅದೇನೋ ಖೇದ. ‘‘ನೀನು ಭಾಗವಹಿಸಿದ್ದರೆ ಮೊದಲ ಬಹುಮಾನ ನಿನಗೇ ಸಿಗುತ್ತಿತ್ತು...’’ ಜಾನಕಿ ಹೇಳಿದಳು.

ಮುಸ್ತಫಾ ಸಂಕೋಚದಿಂದ ತಲೆ ತಗ್ಗಿಸಿದ ‘‘ಹಾಗೇನೂ ಇಲ್ಲ. ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ...ಈ ಬಾರಿ ನಿಮಗೇ ಮೊದಲ ಬಹುಮಾನ...’’

ಜಾನಕಿ ಸುಮ್ಮಗೆ ನಕ್ಕಳು.

ಅದೊಂದು ದಿನ ಜಾನಕಿ ಕೇಳಿದಳು ‘‘ನೀನು ಯಾಕೆ ಶುಕ್ರವಾರ ಮಧ್ಯಾಹ್ನ ಹಾಗೆ ಜೀವ ಬಿಟ್ಟು ಓಡುವುದು...’’

‘‘ತಡವಾದರೆ ಶುಕ್ರವಾರದ ನಮಾಝ್ ಮುಗಿದು ಬಿಡುತ್ತದೆ ಅದಕ್ಕೆ...’’

‘‘ಬೇರೆ ದಿನ ಮಧ್ಯಾಹ್ನ ನಮಾಝ್‌ಮಾಡುವುದಿಲ್ಲವ ನೀನು? ಆಗ ಯಾಕೆ ಹೀಗೆ ಓಡುವುದಿಲ್ಲ...’’ ಜಾನಕಿ ಅರ್ಥವಾಗದೆ ಕೇಳಿದ್ದಳು.

‘‘ಹಾಗಲ್ಲ...ಶುಕ್ರವಾರ ಎಲ್ಲರೂ ಜೊತೆಯಾಗಿ ನಮಾಝ್ ಮಾಡಬೇಕು...ಅಲ್ಲಿ ನನಗಾಗಿ ಯಾರು ಕಾಯುವುದಿಲ್ಲವಲ್ಲ...’’

‘‘ಅವತ್ತೊಂದು ದಿನ ನಮಾಝ್ ಮಾಡದೆ ಇದ್ದರೆ ಏನಾಗುತ್ತದೆ...? ಆಕಾಶ ಕೆಳಗೆ ಬೀಳುತ್ತದಾ?’’ ಜಾನಕಿ ಕೇಳಿದಳು.

ಮುಸ್ತಫಾ ಒಂದು ಕ್ಷಣ ವೌನವಾಗಿ ಬಳಿಕ ಹೇಳಿದ ‘‘ನಾನು ಶುಕ್ರವಾರದ ನಮಾಝ್ ತಪ್ಪಿಸಿಯೇ ಇಲ್ಲ ಗೊತ್ತಾ? ತಪ್ಪಿಸಿದರೆ ಮನಸ್ಸಿಗೆ ಎಂತದೋ ಅಸಮಾಧಾನ...ಅಪ್ಪ ಹೇಳುತ್ತಾರೆ ‘ಸಮಯವನ್ನು ನಮಗೆ ಕೊಟ್ಟದ್ದೇ ದೇವರು. ಅವನದೇ ಐದು ನಿಮಿಷವನ್ನು ಅವನಿಗೆ ಮರಳಿಸುವುದರಲ್ಲಿ ನಾವು ಜಿಪುಣತನ ತೋರಿಸಬಾರದು’ ಎಂದು.’’

ಜಾನಕಿ ಹೆಚ್ಚು ಚರ್ಚೆಗೆ ಹೋಗಲಿಲ್ಲ. ಇದ್ದಕ್ಕಿದ್ದಂತೆಯೇ ಹೇಳಿದಳು ‘‘ನಿನಗೊಂದು ವಿಷಯ ಗೊತ್ತಾ? ನಾಳೆ ನಾನು ಹುಟ್ಟಿದ ದಿನ....’’

‘‘ಹಾಂ...?.’’ ಮುಸ್ತಫಾ ಅರ್ಥವಾಗದೇ ಕೇಳಿದ.

‘‘ನಾಳೆ ನನ್ನ ಬರ್ತ್‌ಡೇ...’’ ಜಾನಕಿ ಹೇಳಿ ನಕ್ಕಳು.

‘‘ಓಹ್...ಶುಭಾಶಯ...’’ ಮುಸ್ತಫಾ ಹೇಳಿದ.

‘‘ಬರೇ ಶುಭಾಶಯವಾ...? ಉಡುಗೊರೆ ಏನೂ ಇಲ್ಲವಾ?’’ ಜಾನಕಿ ಕೇಳಿದಳು.

ಮುಸ್ತಫಾ ಅವಕ್ಕಾದ. ಈ ಕುರಿತು ಯೋಚಿಸಿಯೇ ಇರಲಿಲ್ಲ. ‘‘ನಾಳೆ ಅಲ್ಲವಾ? ಕೊಡುವಾ’’ ಎಂದು ಬಿಟ್ಟ. ‘‘ನೋಡುವಾ ಏನು ಕೊಡ್ತೀ ಅಂತಾ...’’ ಎನ್ನುತ್ತಾ ಜಾನಕಿ ಅಲ್ಲಿಂದ ನಡೆದಿದ್ದಳು. ಮುಸ್ತಫಾ ನಿಂತಲ್ಲೇ ಸಂಕಟಕ್ಕೆ ಸಿಕ್ಕಿ ಹಾಕಿ ಕೊಂಡಿದ್ದ. ಯಾಕೆಂದರೆ ಒಳ್ಳೆಯ ಉಡುಗೊರೆ ಕೊಳ್ಳಲು ಹಣ ಬೇಕು. ಅಗತ್ಯವಿಲ್ಲದೇ ಅವನು ತಂದೆಯ ಬಳಿ ಹಣ ಕೇಳುವುದೇ ಇಲ್ಲ. ತಂದೆಯ ಬಳಿ ಹಣ ಕೇಳಬೇಕಾದರೆ ಕಾರಣ ಹೇಳಬೇಕು. ತಾಯಿಯ ಬಳಿ ಕೇಳಬೇಕು ಎಂದು ಯೋಚಿಸಿ, ಮನೆಯ ಕಡೆ ನಡೆದ. ಮನೆ ತಲುಪಿದ ಮೇಲೂ ಅವನ ಸಮಸ್ಯೆ ಬಗೆ ಹರಿಯಲಿಲ್ಲ. ತಾಯಿಯ ಬಳಿ ಹಣ ಕೇಳಬೇಕು ಅನ್ನಿಸಿದರೂ ಧೈರ್ಯ ಬರಲಿಲ್ಲ.

‘‘ಯಾಕೋ ಹಣ?’’ ಎಂದು ಕೇಳಿದರೆ ತಾಯಿಯ ಬಳಿ ಸುಳ್ಳು ಹೇಳಬೇಕು. ತಾಯಿಯ ಜೊತೆ ಹಾಗೆಲ್ಲ ಸುಳ್ಳು ಹೇಳಿದವನೇ ಅಲ್ಲ ಮುಸ್ತಫಾ. ರಾತ್ರಿಯಿಡೀ ಯೋಚಿಸುತ್ತಲೇ ಕಳೆದಿದ್ದ. ಕೊನೆಗೂ ಮಧ್ಯ ರಾತ್ರಿ ಅವನೊಂದು ನಿರ್ಧಾರಕ್ಕೆ ಬಂದ.

ಮರುದಿನ ಕಾಲೇಜಿನಲ್ಲಿ ಎಲ್ಲರೂ ಜಾನಕಿಯನ್ನು ಅಭಿನಂದಿಸುವವರೇ. ಕೆಲವರು ಸಣ್ಣ ಪುಟ್ಟ ಉಡುಗೊರೆಗಳನ್ನು ಜಾನಕಿಗೆ ಅರ್ಪಿಸುತ್ತಿದ್ದರು. ಮುಸ್ತಫಾ ತನ್ನ ಸರದಿಗಾಗಿ ತರಗತಿ ಬಿಡುವವರೆಗೆ ಕಾದ. ತರಗತಿ ಬಿಟ್ಟದ್ದೇ, ಶಾಲೆಯ ಗೇಟಿನ ಬಳಿ ಅವಳಿಗಾಗಿ ಕಾದು ನಿಂತ. ಕೈಯಲ್ಲೊಂದು ಸಣ್ಣ ಉಡುಗೊರೆಯ ಪೆಟ್ಟಿಗೆ. ತಾನೇ ಬಣ್ಣದ ಕಾಗದಗಳಿಂದ ಅದನ್ನು ಅಲಂಕರಿಸಿದ್ದ. ಜಾನಕಿಯನ್ನು ಕಂಡದ್ದೇ ಉಡುಗೊರೆಯನ್ನು ಅವಳೆಡೆಗೆ ಚಾಚಿ ‘‘ಹುಟ್ಟು ಹಬ್ಬದ ಶುಭಾಶಯಗಳು’’ ಎಂದ.

ಜಾನಕಿ ಕುತೂಹಲದಿಂದ ಅದನ್ನು ತೆಗೆದುಕೊಂಡಳು. ‘‘ಏನೋ ಇದು...ನಾನೇನೋ ನಿನ್ನ ತಂದೆಯ ಜವಳಿ ಅಂಗಡಿಯಿಂದ ಒಂದು ಪಟ್ಟೆ ಸೀರೆ ತರ್ತೀಯೇನೋ ಎಂದು ಕೊಂಡಿದ್ದೆ. ನೋಡಿದರೆ ಇಷ್ಟು ಸಣ್ಣ ಉಡುಗೊರೆ...’’ ತಮಾಷೆ ಮಾಡಿದಳು.

ಮುಸ್ತಫಾ ಬರಿದೇ ನಕ್ಕು ಅಲ್ಲಿಂದ ತೆರಳಿದ. ಅಂದು ತರಗತಿಯಲ್ಲಿ ಗೆಳೆಯರಿಂದ ಸಿಕ್ಕಿದ ಉಡುಗೊರೆಗಳೆಲ್ಲ ಮೀನಾಕ್ಷಿಯ ಚೀಲದಲ್ಲಿದ್ದವು.

‘‘ಮುಸ್ತಫಾ ಏನು ಉಡುಗೊರೆ ಕೊಟ್ಟಿರಬಹುದು...’’ ಎಂದು ಅವಳಿಗೆ ಕುತೂಹಲವಾಗಿ, ಅಲ್ಲೇ ತೆರೆದು ನೋಡೋಣವೇ ಎಂದೆನಿಸಿತು. ‘‘ಬಾರೇ ಹೋಗೋಣ...ಹಾಸ್ಟೆಲ್‌ನಲ್ಲಿ ಎಲ್ಲ ತೆರೆದು ನೋಡೋಣ...’’ ಎಂದು ಮೀನಾಕ್ಷಿ ಎಳೆದುಕೊಂಡು ಹೋದಳು.

ಹಾಸ್ಟೆಲ್‌ಗೆ ತಲುಪಿ, ಜಾನಕಿ, ಮೀನಾಕ್ಷಿ ಎಲ್ಲ ಉಡುಗೊರೆಗಳನ್ನು ತೆರೆದು ನೋಡತೊಡಗಿದರು. ಜಾನಕಿ ಮೊದಲು ಕೈಗೆತ್ತಿಕೊಂಡದ್ದೇ ಮುಸ್ತಫಾನ ಉಡುಗೊರೆ.

‘ಜಾನಕಿಯವರ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯ’ ಎಂದು ಅವನದೇ ಹಸ್ತಾಕ್ಷರದಲ್ಲಿ ಬರೆಯಲಾಗಿತ್ತು. ಮೆಲ್ಲಗೆ ಉಡುಗೊರೆಯನ್ನು ಬಿಡಿಸಿದಳು. ನೋಡಿದರೆ ಜಾನಕಿ ದಂಗಾಗಿದ್ದಳು. ಆಕೆಯ ಗಂಟಲು ಕಟ್ಟಿತ್ತು. ಮೀನಾಕ್ಷಿಯೂ ಅದನ್ನು ನೋಡಿ ಕಣ್ಣರಳಿಸಿದಳು.

ಅದು ಕನ್ನಡ ಪಂಡಿತರು ಆತನಿಗೆ ಕಳೆದ ವರ್ಷ ನೀಡಿದ ಬಂಗಾರದ ಬಣ್ಣದ ಪೆನ್ನಾಗಿತ್ತು. ಅಂತರ್ಕಾಲೇಜು ಸ್ಪರ್ಧೆಯಲ್ಲಿ ಬಹುಮಾನ ಬಂದಾಗ ಪಂಡಿತರು ನೀಡಿದ್ದ ಉಡುಗೊರೆ!

ಅದು ತನ್ನ ಕನಸಿನ ಪೆನ್ನಾಗಿತ್ತು. ಮುಸ್ತಫಾ ಅದನ್ನೇ ತನಗೆ ಉಡುಗೊರೆಯಾಗಿ ನೀಡಿದ್ದ. ಆ ಉಡುಗೊರೆಯನ್ನು ನೋಡಿದ ಬಳಿಕ, ಉಳಿದ ಉಡುಗೊರೆಗಳನ್ನು ತೆರೆಯುವ ಆಸಕ್ತಿಯೇ ಅವಳಲ್ಲಿ ಉಳಿಯಲಿಲ್ಲ. ಮರುದಿನ ಅವಳು ಆ ಪೆನ್ನಿನ ಜೊತೆಗೇ ಕಾಲೇಜಿಗೆ ತೆರಳಿದಳು. ಮುಸ್ತಫಾನಿಗೆ ಉಡುಗೊರೆಯಾಗಿ ಸಿಕ್ಕಿದ್ದ ಪೆನ್ನು ಜಾನಕಿಯ ಕೈಯಲ್ಲಿರುವುದು ನೋಡಿ ಹಲವರಿಗೆ ಅಚ್ಚರಿ, ಸಂತೋಷ ಎರಡೂ ಆಗಿತ್ತು. ಹುಡುಗಿಯರೆಲ್ಲರೂ ನಾಮುಂದು, ತಾಮುಂದು ಎಂದು ಆ ಪೆನ್ನಿನಲ್ಲಿ ತಮ್ಮ ತಮ್ಮ ನೋಟ್‌ಬುಕ್‌ನಲ್ಲಿ ಗೀಚಿಕೊಂಡರು. ಅವರ ಸಂಭ್ರಮಗಳನ್ನೆಲ್ಲ ಮುಸ್ತಫಾ ಓರೆಗಣ್ಣಲ್ಲಿ ಗಮನಿಸುತ್ತಾ ತನ್ನ ಬಗ್ಗೆಯೇ ತಾನು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ. ಅಂದು ಸಂಜೆ ಮುಸ್ತಫಾನ ಬಳಿ ಬಂದ ನರೇಶ ಒಂದು ರೀತಿಯಲ್ಲಿ ಅವನನ್ನು ನೋಡಿ ‘‘ಹೂಂ..ಹೂಂ...ನಡೀಲಿ...ನಡೀಲಿ...’’ ಎಂದು ವ್ಯಂಗ್ಯವಾಗಿ ನಕ್ಕ.

 ಮುಸ್ತಫಾನಿಗೆ ಆ ವ್ಯಂಗ್ಯದ ಅರ್ಥ ಹೊಳೆಯಲೇ ಇಲ್ಲ.

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News