ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದಿಂದ ಹೋರಾಟಕ್ಕೆ ಕೆಟ್ಟ ಹೆಸರು: ಮೋಹನ್ ಭಾಗವತ್
ಹೊಸದಿಲ್ಲಿ,ಎ.9: ದೇಶಾದ್ಯಂತ ಗೋಹತ್ಯೆಯನ್ನು ನಿಷೇಧಿಸುವಂತೆ ರವಿವಾರ ಇಲ್ಲಿ ಆಗ್ರಹಿಸಿದ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರು, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸಾಚಾರವು ಹೋರಾಟಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಹೇಳಿದರು.
ಇಲ್ಲಿ ಮಹಾವೀರ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಿದ್ದ ಅವರು, ದೇಶಾದ್ಯಂತ ಗೋಹತ್ಯೆ ನಿಷೇಧಗೊಳ್ಳಬೇಕೆಂದು ನಾವು ಬಯಸುತ್ತೇವೆ. ಆದರೆ ಗೋರಕ್ಷಣೆಯ ಕಾರ್ಯ ಕಾನೂನಿನ ಇತಿಮಿತಿಯಲ್ಲಿಯೇ ನಡೆಯಬೇಕು ಎಂದರು.
ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಣಿಕೆ ಆರೋಪದಲ್ಲಿ ಹೈನುಗಾರ ಪೆಹ್ಲೂ ಖಾನ್(55) ತಥಾಕಥಿತ ಗೋರಕ್ಷಕರ ಗುಂಪಿನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಪ್ರಕರಣದ ವಿರುದ್ಧ ಜನಾಕ್ರೋಶದ ನಡುವೆಯೇ ಭಾಗವತ್‌ರ ಹೇಳಿಕೆ ಹೊರಬಿದ್ದಿದೆ.
ಘಟನೆಯ ಸಂಬಂಧ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಸರಕಾರವನ್ನು ತೀವ್ರ ತರಾಟೆಗೆತ್ತಿ ಕೊಂಡಿದ್ದು, ಬಿಜೆಪಿ ಆಡಳಿತದ ರಾಜಸ್ಥಾನದಲ್ಲಿ ಸಾಂವಿಧಾನಿಕ ಆಡಳಿತ ಕುಸಿದು ಬಿದ್ದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.