×
Ad

ತಂದೆಯ ಸಾವಿನ ದು:ಖದಲ್ಲೂ ಅರ್ಧಶತಕ ಸಿಡಿಸಿದ ಪಂತ್

Update: 2017-04-09 20:30 IST

ಬೆಂಗಳೂರು, ಎ.9: ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ತಂದೆ ನಿಧನರಾಗಿ ಕೆಲವೇ ದಿನಗಳು ಕಳೆದಿದೆ. ಈ ದು:ಖದಲ್ಲೂ ಆಡಿದ ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ದರು.

ಶನಿವಾರ ರಾತ್ರಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ 15 ರನ್‌ಗಳ ಸೋಲು ಅನುಭವಿಸಿದ್ದರೂ, ಯುವ ಆಟಗಾರ ಪಂತ್ 57 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು.

ರಿಷಭ್ ಪಂತ್ ಅವರ ತಂದೆ ರಾಜೇಂದ್ರ ಪಂತ್ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ತಂದೆಯ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿದ ಪಂತ್ ತನ್ನ ತಾಯಿ ಹಾಗೂ ಮನೆ ಮಂದಿಗೆ ಸಾಂತ್ವನ ಹೇಳಿ ಶುಕ್ರವಾರ ತಂಡವನ್ನು ಕೂಡಿಕೊಂಡಿದ್ದರು.

ಈ ದು:ಖದಲ್ಲೂ ಅಭ್ಯಾಸ ನಡೆಸಿದ ಪಂತ್ ರಾಯಲ್ ಚಾಲೆಂಜರ್ಸ್‌ ವಿರುದ್ಧದ ಪಂದ್ಯದಲ್ಲಿ ಶನಿವಾರ ಯಾವುದೇ ಒತ್ತಡಕ್ಕೆ ಒಳಗಾಗದೆ ಆಡಿದ್ದರು. ಮೊದಲು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದ ಪಂತ್ ಅವರು ನದೀಮ್ ಬೌಲಿಂಗ್‌ನಲ್ಲಿ ಆರ್‌ಸಿಬಿಯ ಹಂಗಾಮಿ ನಾಯಕ ಶೇನ್ ನೀಡಿದ್ದ ಕ್ಯಾಚ್ ತೆಗೆದುಕೊಂಡು, ವ್ಯಾಟ್ಸನ್ ಬ್ಯಾಟಿಂಗ್‌ನ್ನು 24ರಲ್ಲಿ ಕೊನೆಗೊಳಿಸಲು ತಂಡಕ್ಕೆ ನೆರವಾಗಿದ್ದರು.

ಆರ್‌ಸಿಬಿ ವಿರುದ್ಧ ಗೆಲುವಿಗೆ 158 ರನ್‌ಗಳ ಸವಾಲು ಪಡೆದ ಡೆಲ್ಲಿ 7.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 55 ರನ್ ಗಳಿಸಿ ಸೋಲಿನ ದವಡೆಗೆ ಸಿಲುಕಿದ್ದಾಗ ಕ್ರೀಸ್‌ಗೆ ಬ್ಯಾಟಿಂಗ್‌ಗೆ ಆಗಮಿಸಿದ್ದರು. ಆದರೆ ಅವರಿಗೆ ಸರಿಯಾದ ಬೆಂಬಲ ಸಿಗಲಿಲ್ಲ. ಹೀಗಿದ್ದರೂ ಅವರು ತಂಡಕ್ಕಾಗಿ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು. ಪಂತ್ ನಿರ್ಗಮಿಸುತ್ತಿದ್ದಂತೆ ಡೆಲ್ಲಿಯ ಗೆಲುವಿನ ಕನಸು ಮಣ್ಣುಗೂಡಿತು.

ಉತ್ತರ ಪ್ರದೇಶದ ಹರಿದ್ವಾರದ 19ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಪಂತ್ ಕ್ರೀಸ್‌ನಲ್ಲಿ ಇರುವ ತನಕ ಡೆಲ್ಲಿ ಗೆಲ್ಲುವ ಸಾಧ್ಯತೆ ಇತ್ತು. ಕೊನೆಯ ಓವರ್‌ನಲ್ಲಿ ಡೆಲ್ಲಿಯ ಗೆಲುವಿಗೆ 19 ರನ್‌ಗಳ ಆವಶ್ಯಕತೆ ಇತ್ತು. 20ನೆ ಓವರ್‌ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಔಟಾದರು. ಪವನ್ ನೇಗಿ ಎಸೆತದಲ್ಲಿ ಬೌಲ್ಡ್ ಆಗಿ ರಿಷಭ್ ಪಂತ್ ಪೆವಿಲಿಯನ್ ಸೇರುತ್ತಿದ್ದಂತೆ ಆರ್‌ಸಿಬಿ ಗೆಲುವಿಗೆ ಎದುರಾಗಿದ್ದ ಅಡಚಣೆ ದೂರವಾಗಿತ್ತು.

  ರಿಷಭ್ ಪಂತ್ ಕ್ರೀಸ್‌ಗೆ ಆಗಮಿಸಿ ಇಕ್ಬಾಲ್ ಅಬ್ದುಲ್ಲರ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ್ದರು.ಅವರು 2007ನೆ ಸಾಲಿನ ಐಪಿಎಲ್‌ನಲ್ಲಿ ಎದುರಿಸಿದ ಮೊದಲ ಎಸೆತ ಇದಾಗಿತ್ತು. ಪಂತ್ 33 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದರು. ಅವರು ನಡೆಸಿದ 70 ನಿಮಿಷಗಳ ಬ್ಯಾಟಿಂಗ್‌ನಲ್ಲಿ 36 ಎಸೆತಗಳನ್ನು ಎದುರಿಸಿದರು. 3 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಹಾಯದಿಂದ ಪಂತ್ 57 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು.

ಹಿಂದೆ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರು ತಂದೆ ನಿಧನದ ದು:ಖದ ನಡುವೆ ಆಡಿದ ಆಟವನ್ನು ನೆನಪಿಸುವಂತಾಗಿತ್ತು ಪಂತ್ ಅವರ ಬ್ಯಾಟಿಂಗ್. ಸಚಿನ್ ತೆಂಡುಲ್ಕರ್ 1999ರಲ್ಲಿ ವಿಶ್ವಕಪ್‌ನಲ್ಲಿ ಮತ್ತು ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿ ತಮ್ಮ ತಂಡಗಳ ಗೆಲುವಿಗೆ ನೆರವಾಗಿದ್ದರು.

ರಿಷಭ್ ಪಂತ್ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ವೇಗದ ಶತಕ ದಾಖಲಿಸಿದ್ದರು. ಇಂಡಿಯಾ ಅಂಡರ್ -19 ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ರಿಷಭ್ ಪಂತ್ ಅವರಲ್ಲಿರುವ ಪ್ರತಿಭೆಯನ್ನು ಬಹಳ ಹಿಂದೆಯೇ ಗಮನಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು.

ಭಾರತದ ಪರ ಟ್ವೆಂಟಿ-20 ಪಂದ್ಯದಲ್ಲಿ ಪಂತ್ ಒಂದು ಪಂದ್ಯ ಆಡಿದ್ದರು. 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 4 ಶತಕ ಮತ್ತು 3 ಅರ್ಧಶತಕ ದಾಖಲಿಸಿರುವ ಪಂತ್ 1,101 ರನ್ ಕಲೆ ಹಾಕಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 308 ರನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News