ಬೆಂಕಿ ಅನಾಹುತ : 200ಕ್ಕೂ ಹೆಚ್ಚು ವಾಹನ ಭಸ್ಮ
Update: 2017-04-09 20:54 IST
ರಾಯ್‌ಪುರ, ಎ.9: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ರೈಲು ನಿಲ್ದಾಣದ ವಾಹನಗಳನ್ನು ನಿಲ್ಲಿಸುವ (ಪಾರ್ಕಿಂಗ್) ಪ್ರದೇಶದಲ್ಲಿ ರವಿವಾರ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಅಪರಾಹ್ನ 12 ಗಂಟೆಯ ವೇಳೆ ಪಾರ್ಕಿಂಗ್ ಪ್ರದೇಶದ ಮೂಲೆಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಪಡೆಗಳಿಗೆ ಮಾಹಿತಿ ನೀಡಲಾಯಿತು.
ಸ್ಥಳದಲ್ಲಿ ಸುಮಾರು 1000 ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಲಾಗಿದ್ದು ರೈಲ್ವೇ ಸುರಕ್ಷಾ ಪಡೆಯ ನೆರವಿನಿಂದ ವಾಹನಗಳನ್ನು ಸ್ಥಳಾಂತರಿಸಲಾಯಿತು. ಆದರೆ 200ಕ್ಕೂ ಹೆಚ್ಚು ದ್ವಿಚಕ್ರ ವಾಹನ ಬೆಂಕಿಗೆ ಆಹುತಿಯಾಗಿದೆ.
ಸುಮಾರು 2 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲಾಯಿತು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.