ಶ್ರೀನಗರ ಲೋಕಸಭಾ ಉ.ಚುನಾವಣೆ: ಕೇವಲ ಶೇ.6.5 ಮತದಾನ; 30 ವರ್ಷಗಳಲ್ಲೇ ಅತ್ಯಂತ ಕನಿಷ್ಠ
ಭಾರೀ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್ ನಡುವೆ ನಡೆದ ಶ್ರೀನಗರ -ಬಡ್‌ಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇವಲ 6.5 ಶೇಕಡ ಮತದಾನವಾಗಿದ್ದು, ಇದು ಕಳೆದ 30 ವರ್ಷಗಳಲ್ಲೇ ಅತ್ಯಂತ ಕನಿಷ್ಠವೆಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಹಲವು ಮತಗಟ್ಟೆಗಳ ಸಮೀಪ ಹಿಂಸಾಚಾರ ನಡೆದಿರುವುದರಿಂದ ಸುಮಾರು 500ರಿಂದ 100ರವರೆಗಿನ ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆಯೆಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಶಂತನು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 12.61 ಲಕ್ಷ ಮತದಾರರಿದ್ದು, ಈ ಪೈಕಿ ಕೇವಲ ಶೇ.6.5ರಷ್ಟು ಜನರು ಮತಗಳನ್ನು ಚಲಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಶಾಂತಮನು ಸುದ್ದಿಗಾರರಿಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 50 ರಿಂದ 100 ಅಥವಾ ಅದಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಬಹುದು ಎಂದು ತಿಳಿಸಿದರು.
ಎ.12ರಂದು ನಿಗದಿಯಾಗಿರುವ ಅನಂತನಾಗ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯು ಹೆಚ್ಚಿನ ಸವಾಲನ್ನು ಒಡ್ಡಲಿದೆ ಎಂದರು. ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಕಿರಿಯ ಸೋದರ ತಸದುಕ್ ಮುಫ್ತಿ ಈ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ತನ್ಮಧ್ಯೆ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಉಮರ್ ಅಬ್ದುಲ್ಲಾ ಅವರು ಚುನಾವಣೆಯನ್ನು ಸುಗಮವಾಗಿ ನಡೆಸುವಲ್ಲಿ ವೈಫಲ್ಯಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.