ದಂಗಲ್ ಆಮಿರ್‌ಗೆ ಕೈತಪ್ಪಿದ ಶ್ರೇಷ್ಠ ನಟ ಪ್ರಶಸ್ತಿ

Update: 2017-04-09 18:56 GMT

ಅಕ್ಷಯ್‌ಕುಮಾರ್‌ಗೆ ಈ ಸಲದ ಶ್ರೇಷ್ಠ ನಟ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ದೊರೆತಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಹಲವರ ಹುಬ್ಬೇರಿಸಿದೆ. ‘‘ರುಸ್ತುಂ’’ ಚಿತ್ರದಲ್ಲಿ ಕೊಲೆ ಆರೋಪಿ ನೌಕಾಪಡೆ ಕಮಾಂಡರ್ ಪಾತ್ರದಲ್ಲಿ ಅಕ್ಷಯ್ ಅಭಿನಯವು, ದಂಗಲ್‌ನಲ್ಲಿ ಮಧ್ಯವಯಸ್ಸಿನ ಕುಸ್ತಿಪಟುವಾಗಿ ಆಮಿರ್ ಖಾನ್‌ರ ನಟನೆಗಿಂತ ಶ್ರೇಷ್ಠವೆಂಬುದನ್ನು ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಸಮಿತಿಯು ಯಾಕೆ ಪರಿಗಣಿಸಿತೆಂಬ ಬಗ್ಗೆ ಟ್ವಿಟರ್‌ನಲ್ಲಿ ಅನೇಕ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಅಕ್ಷಯ್‌ಕುಮಾರ್ ಅಥವಾ ಮೋಹನ್‌ಲಾಲ್ ಅಂತಿಮ ಆಯ್ಕೆಯಾಗಿದ್ದಾರೆಂದು ತೀರ್ಪುಗಾರರ ಸಮಿತಿಯ ಅಧ್ಯಕ್ಷ ಪ್ರಿಯದರ್ಶನ್ ಶುಕ್ರವಾರ ಪ್ರಶಸ್ತಿಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ತಿಳಿಸಿದ್ದರು.

ಅಕ್ಷಯ್‌ಗೆ ಶ್ರೇಷ್ಠ ನಟ ಪ್ರಶಸ್ತಿ ದೊರೆತರೆ, ಮೋಹನ್‌ಲಾಲ್‌ಗೆ ತೀರ್ಪುಗಾರರ ಪ್ರಶಸ್ತಿ ಒಲಿದಿದೆ. ಅಕ್ಷಯ್‌ಗೆ, ಅವರ ಅಭಿನಯದ ‘‘ರುಸ್ತುಂ’’ ಹಾಗೂ ‘‘ಏರ್‌ಲಿಫ್ಟ್’’ಗೆ ಜಂಟಿಯಾಗಿ ಪ್ರಶಸ್ತಿ ದೊರೆತಿರುವ ಹಾಗೆ ಭಾಸವಾಗುತ್ತದೆ. ನೈಜವ್ಯಕ್ತಿಗಳ ಪಾತ್ರಗಳಿಂದ ಹಿಡಿದು ಕಾಲ್ಪನಿಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಅಕ್ಷಯ್‌ಗಿರುವ ಪ್ರತಿಭೆಗಾಗಿ ಈ ಪುರಸ್ಕಾರ ಸಂದಿದೆಯೆಂದು ಪ್ರಿಯದರ್ಶನ್ ಹೇಳಿದ್ದರು. ಈ ನಡುವೆ ತೀರ್ಪುಗಾರ ಮಂಡಳಿಯು ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದ ದಂಗಲ್‌ನ್ನು ಎರಡು ಬಾರಿ ವೀಕ್ಷಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ‘‘ದಂಗಲ್‌ನ್ನು ಮತ್ತೊಮ್ಮೆ ನೋಡಿದ್ದೆನು. ಆದರೆ ಅದು ಪ್ರಶಸ್ತಿಯನ್ನು ತಪ್ಪಿಸಿಕೊಂಡಿದೆ. ಯಾಕೆಂದರೆ ಪ್ರಾದೇಶಿಕ ಚಿತ್ರಗಳು ಇನ್ನೂ ಉತ್ತಮವಾಗಿದ್ದವು’’ ಎಂದು ಹೇಳಿದ್ದಾರೆ.

ದಂಗಲ್‌ಗಾಗಿ ಆಮಿರ್‌ಖಾನ್ ದೇಹತೂಕವನ್ನು ಹೆಚ್ಚಿಸಿದ್ದಲ್ಲದೆ, ಆನಂತರ ಅದನ್ನು ಇಳಿಸಿದ್ದರೂ, ತೀರ್ಪುಗಾರರಿಗೇನೂ ಅದು ಮೆಚ್ಚುಗೆಯುಂಟು ಮಾಡಿಲ್ಲ. ‘‘ಇಲ್ಲಿ ಯಾರಾದರೂ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆಯೇ ಎಂಬುದು ಮಾತ್ರವೇ ಮುಖ್ಯವಲ್ಲ. ನಾವು ಅವರನ್ನು ಅತ್ಯುತ್ತಮ ನಟನೆಂದು ಕರೆಯಲಾಗದು. ಮೋಹನ್‌ಲಾಲ್ ಹಾಗೂ ಅಕ್ಷಯ್‌ಕುಮಾರ್ ದೀರ್ಘ ಸಮಯದಿಂದ ಚಿತ್ರರಂಗದಲ್ಲಿ ಉಳಿದುಕೊಂಡು ಬಂದಿದ್ದಾರೆ. ನಾವು ಅವರಿಗೆ ಪ್ರಶಸ್ತಿ ನೀಡಿರುವುದು ಅವರನ್ನು ಪ್ರೋತ್ಸಾಹಿಸಿದಂತೆ’’ ಎಂದು ಪ್ರಿಯದರ್ಶನ್ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಅಕ್ಷಯ್‌ಗೆ ಅಭಿನಂದನೆಗಳ ಸುರಿಮಳೆಯಾಗಿರುವ ಜೊತೆಗೆ ಹಲವಾರು ಮಂದಿ ಆಮಿರ್‌ಖಾನ್‌ನನ್ನು ಯಾಕೆ ಕಡೆಗಣಿಸಲಾಯಿತೆಂದು ಪ್ರಶ್ನಿಸಿದ್ದಾರೆ. ‘‘ಅಲಿಗಡ’’ ಚಿತ್ರದಲ್ಲಿ ಮನೋಜ್ ಭಾಜಪೇಯಿ ಅವರ ಅಭಿನಯ ಕೂಡಾ ಪ್ರಶಸ್ತಿಗೆ ಯೋಗ್ಯವಾದುದೆಂದು ಇನ್ನು ಕೆಲವರು ಅಭಿಪ್ರಾಯಿಸಿದ್ದಾರೆ.

ಇನ್ನು ಕೆಲವು ಮಂದಿ ಅಕ್ಷಯ್ ಕುಮಾರ್, ಈ ಹಿಂದೆ ಪ್ರಿಯದರ್ಶನ್ ಅಭಿನಯದ ಚಿತ್ರಗಳಲ್ಲಿ ಅಭಿನಯಿಸಿರುವ ಬಗ್ಗೆ ಗಮನಸೆಳೆದಿದ್ದಾರೆ. ಅಕ್ಷಯ್ ಅಭಿನಯದ ‘‘ಹೇರಾಫೇರಿ’’, ‘‘ಗರಂ ಮಸಾಲಾ’’ ಹಾಗೂ ‘‘ಭಾಗಂ ಭಾಗ್’’ ಚಿತ್ರಗಳನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದರು. ಕೆಲವು ತಿಂಗಳುಗಳ ಹಿಂದೆ, ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಟ ಘೋಷಣೆಯ ವೇಳೆ ಅಕ್ಷಯ್ ಗೈರುಹಾಜರಾಗಿದ್ದರು. ‘‘ಸುಲ್ತಾನ್’’ ಚಿತ್ರಕ್ಕಾಗಿ ಸಲ್ಮಾನ್ ಹಾಗೂ ದಂಗಲ್‌ಗಾಗಿ ಆಮಿರ್, ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಆಮಿರ್ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದರು.

2016ರ ಅತ್ಯಂತ ಹಿಟ್ ಚಿತ್ರವೆನಿಸಿದ ‘ದಂಗಲ್’ ಸಾಮಾನ್ಯ ಪ್ರೇಕ್ಷಕರಿಂದ ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತ್ತು. ಆದರೆ ಈ ಸಲದ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರದಲ್ಲಿ ಅದಕ್ಕೆ ಲಭಿಸಿದ್ದುದು ಕೇವಲ ಒಂದೇ ಪ್ರಶಸ್ತಿ. ಆ ಚಿತ್ರದಲ್ಲಿನ ಅಭಿನಯಕ್ಕಾಗಿ 16 ವರ್ಷ ವಯಸ್ಸಿನ ಝೈರಾ ವಾಸಿಮ್‌ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕುಸ್ತಿಪಟುಗಳಾಗಿ ಬೆಳೆಸುವ ಇಳಿವಯಸ್ಸಿನ ತಂದೆಯ ಪಾತ್ರದಲ್ಲಿ ಆಮಿರ್ ನೀಡಿದ ಅಭಿನಯವು ಅವರ ವೃತ್ತಿಜೀವನದಲ್ಲೇ ಅತ್ಯುತ್ತಮವಾದುದೆಂದು ಪ್ರಶಂಸೆಗೊಳಗಾಗಿತ್ತು. ಬಾಕ್ಸ್‌ಆಫೀಸ್‌ನಲ್ಲಿಯೂ ದಂಗಲ್ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತ್ತು.

 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರದಲ್ಲಿ ಆಮಿರ್‌ಗೆ ಪ್ರಶಸ್ತಿ ದೊರೆಯದೆ ಇರುವ ಬಗ್ಗೆ ಟ್ವಿಟರ್‌ನಲ್ಲಿ ಹರಿದುಬರುತ್ತಿರುವ ಪ್ರತಿಕ್ರಿಯೆಗಳ ಒಂದು ಝಲಕ್ ಇಲ್ಲಿದೆ.

ಪ್ರೀತಮ್ ವರ್ಮಾ
ಆಮಿರ್ ಬದಲಿಗೆ ಅಕ್ಷಯ್‌ಕುಮಾರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೀಸಲಾತಿ ಖೋಟಾದ ವ್ಯಕ್ತಿಗಳ ಜೊತೆ ಸ್ಪರ್ಧಿಸುವಾಗ ಸಾಮಾನ್ಯ ಶ್ರೇಣಿಯ ಜನರು ಕೂಡಾ ಇದೇ ರೀತಿ ಯೋಚಿಸುತ್ತಿರುತ್ತಾರೆ.

ದಿಲ್‌ವಾಲಾ
 ರಾಷ್ಟ್ರೀಯ ಚಲನಚಿತ್ರ ಪುರಸ್ಕಾರಗಳು ಈಗ ಒಂದು ಜೋಕ್ ಆಗಿದೆ! ದಂಗಲ್‌ನಲ್ಲಿ ಆಮಿರ್, ಫ್ಯಾನ್‌ನಲ್ಲಿ ಶಾರುಖ್ ಅಭಿನಯವನ್ನು ನೀವು ನೋಡಿಲ್ಲ. ಈ ವರ್ಷ ಸಲ್ಮಾನ್ ಕೂಡಾ ಎಕೆಗಿಂತ ಉತ್ತಮ ನಟರಾಗಿದ್ದಾರೆ.

ರಿತಿಕಾ ಶರ್ಮಾ
‘‘ರುಸ್ತುಂ’’ಗಾಗಿ ಅಕ್ಷಯ್ ಕುಮಾರ್‌ಗೆ ರಾಷ್ಟ್ರೀಯ ಪ್ರಶಸ್ತಿ?. ಅದ್ಭುತ ಅಭಿನಯಕ್ಕಾಗಿ ಆಮಿರ್‌ಖಾನ್‌ಗೆ ಈ ಪ್ರಶಸ್ತಿ ದೊರೆಯಬೇಕಿತ್ತು. ಕೆಲವೇ ತಿಂಗಳುಗಳಲ್ಲಿ ದೇಹತೂಕ ಹೆಚ್ಚಿಸುವುದು ಹಾಗೂ ಅದನ್ನು ಕಡಿಮೆಗೊಳಿಸುವುದು ಸುಲಭದ ಸಂಗತಿಯೇನೂ ಅಲ್ಲ.

ಶುಭಂ ಮಲೂ
‘‘ರುಸ್ತುಂ’’ಗಾಗಿ ಅಕ್ಷಯ್ ಕುಮಾರ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ?. ದಂಗಲ್‌ಗಾಗಿ ಆಮಿರ್‌ಗೆ ಯಾಕಿಲ್ಲ?. ನೀವು ವ್ಯಕ್ತಿಗಳು (ತೀರ್ಪುಗಾರರು) ನಿಜಕ್ಕೂ ಅಮಲಿನಲ್ಲಿದ್ದೀರೆಂದು ನಾನು ಭಾವಿಸುತ್ತೇನೆ.

ಲೋನ್‌ರೇಂಜರ್
ತೀರ್ಪುಗಾರರ ಮಂಡಳಿಯ ಜನರು ಶ್ರೇಷ್ಠ ನಟ ಪ್ರಶಸ್ತಿಗೆ ಆಮೀರ್ ಮೊದಲ ಆಯ್ಕೆಯೆಂದು ಹೇಳಿದ್ದಾರೆ. ಸಂಬಂಧಪಟ್ಟ ಸಚಿವರು ಯಾಕೆ ಅದನ್ನು ತಿರಸ್ಕರಿಸಿದರು? ಪಕ್ಷಪಾತದ ಸದ್ದು ಜೋರಾಗಿ ಕೇಳಿಬರುತ್ತಿದೆ.

ಸೈಂಟ್‌ಸಿನ್ನರ್
ಯಾಕೆಂದರೆ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಪ್ರಿಯದರ್ಶನ್ ಅಕ್ಷಯ್ ಕುಮಾರ್ ಅವರ ಒಳ್ಳೆಯ ಗೆಳೆಯರಾಗಿದ್ದಾರೆ ಹಾಗೂ ಈಗಾಗಲೇ ಅಕ್ಷಯ್ ಜೊತೆ ಹಿಂದಿಯಲ್ಲಿ ಮಲಯಾಳಂ ಚಿತ್ರದ ರಿಮೇಕ್ ನಿರ್ಮಿಸುವುದಾಗಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News