ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ತಮಿಳುನಾಡಿನ ರೈತರಿಂದ ಬೆತ್ತಲೆ ಪ್ರತಿಭಟನೆ
ಹೊಸದಿಲ್ಲಿ, ಎ.10: ಬರ ಪರಿಹಾರ ನಿಧಿ ಬಿಡುಗಡೆಗೆ ಆಗ್ರಹಿಸಿ ತಮಿಳುನಾಡಿನ ರೈತರು ಸೋಮವಾರ ರಾಜಧಾನಿಯ ದಕ್ಷಿಣ ಬ್ಲಾಕ್‌ನಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂತರ್‌ಮಂತರ್‌ನಲ್ಲಿ ರೈತರ ಸಾಲಮನ್ನಾಕ್ಕಾಗಿ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ರೈತರು ಸೋಮವಾರ ಹೊಸ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದ ತಂಜಾವೂರು ಹಾಗೂ ತಿರುಚಿರಾಪಳ್ಳಿ ರೈತರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾ.14 ರಂದು ಪ್ರಧಾನಮಂತ್ರಿ ನಿವಾಸದ ಹೊರಗೆ ಸುಮಾರು 171ರಷ್ಟಿದ್ದ ರೈತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಕಳೆದ ಶುಕ್ರವಾರ ಭಾರತದ ಮುಖ್ಯ ನ್ಯಾಯಾಧೀಶರಿಗೆ ಲಿಖಿತ ಪತ್ರವನ್ನು ಸಲ್ಲಿಸಿ, ಬರ ಪರಿಹಾರ ಬಿಡುಗಡೆ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದರು.
ರೈತರ ಪ್ರತಿನಿಧಿಗಳು ಮಾ.21 ರಂದು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಫೆ.22ರಂದು ತಮಿಳುನಾಡಿನ ಮುಖ್ಯಮಂತ್ರಿ ಇ. ಪಳನಿಸ್ವಾಮಿ 3.2 ಮಿಲಿಯನ್ ರೈತರಿಗೆ 2,247 ಕೋ.ರೂ. ಬರ ಪರಿಹಾರ ಬಿಡುಗಡೆಗೊಳಿಸಿದ್ದರು.