ಉತ್ತರ ಪ್ರದೇಶದ ನಿರುದ್ಯೋಗ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು : ಕಾರ್ಮಿಕ ಸಚಿವರು
ಲಕ್ನೋ,ಎ.10 : ಉತ್ತರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಬಹಳಷ್ಟು ಅಧಿಕವಾಗಿರುವ ಕಾರಣ ಸದ್ಯದಲ್ಲಿಯೇ ಕೇಂದ್ರವು ರಾಜ್ಯ ಸರಕಾರದ ಜತೆಗೂಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ, ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.
ರಾಷ್ಟ್ರೀಯ ಸರಾಸರಿ ನಿರುದ್ಯೋಗ ಪ್ರಮಾಣ ಶೇ .5.8ರಷ್ಟಾಗಿದ್ದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ಕ್ರಮವಾಗಿ ಶೇ .3.4 ಹಾಗೂ ಶೇ 4.4 ಆಗಿದೆ ಎಂದು ಸೋಮವಾರ ಲೋಕಸಭೆಯಲ್ಲಿ ಮಾತನಾಡುತ್ತಾ ಸಚಿವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 5.8ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ. 6.5ರಷ್ಟಿದ್ದು ಇದು ಸಾಕಷ್ಟು ಹೆಚ್ಚೆಂದೇ ಹೇಳಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ಸಮಸ್ಯೆ ಪರಿಹಾರಕ್ಕೆ ಉತ್ತರ ಪ್ರದೇಶ ಸರಕಾರದೊಂದಿಗೆ ಸೇರಿಕೊಂಡು ಶೀಘ್ರದಲ್ಲಿಯೇ ಕ್ರಮಗಳನ್ನು ಕೈಗೊಳ್ಳಲಾಗುವುದು, ಎಂದ ಸಚಿವರು, ದೇಶದಾದ್ಯಂತ 470 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದ್ದರೆ, 21 ಮೇಳಗಳು ಉತ್ತರ ಪ್ರದೇಶದಲ್ಲಿ ಆಯೋಜಿಸಲ್ಪಟ್ಟಿವೆ, ಎಂದರು.