×
Ad

ಮತಪತ್ರದ ಮೂಲಕ ಚುನಾವಣೆಗೆ ಪಕ್ಷಗಳ ಪಟ್ಟು

Update: 2017-04-11 09:14 IST

ಹೊಸದಿಲ್ಲಿ, ಎ.11: ಮುಂದಿನ ಎಲ್ಲ ಚುನಾವಣೆಗಳನ್ನು ಹಿಂದೆ ಇದ್ದ ಮಾದರಿಯಲ್ಲಿ ಮತಪತ್ರಗಳ ಮೂಲಕವೇ ಮಾಡಿ ಎಂದು ಹದಿನಾರು ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಸೋಮವಾರ ಮನವಿ ಮಾಡಿಕೊಂಡಿವೆ.

ಇತ್ತೀಚಿನ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭಾ ಚುನಾವಣೆ ವೇಳೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಈ ಪಕ್ಷಗಳು, ಹಳೆಯ ಚುನಾವಣಾ ವ್ಯವಸ್ಥೆಗೆ ಮರಳುವಂತೆ ಆಗ್ರಹಿಸಿವೆ.

"ಎಲೆಕ್ಟ್ರಾನಿಕ್ ಮತಯಂತ್ರಗಳ ಮೇಲೆ ರಾಜಕೀಯ ಪಕ್ಷಗಳಿಗೆ ವಿಶ್ವಾಸದ ಕೊರತೆಯ ಸ್ಥಿತಿ ಹೆಚ್ಚುತ್ತಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಬಗೆಗಿನ ಜನರ ವಿಶ್ವಾಸವನ್ನೂ ಇದು ಛಿದ್ರಗೊಳಿಸಿದೆ" ಎಂದು ಪಕ್ಷಗಳ ಮುಖಂಡರು ಮನವಿ ಸಲ್ಲಿಸುವ ವೇಳೆ ಅಭಿಪ್ರಾಯಪಟ್ಟರು.

ಬುಧವಾರ ಈ ಪಕ್ಷಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೂ ಈ ಮನವಿ ಸಲ್ಲಿಸಲಿವೆ.
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕ್ರಮಬದ್ಧತೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಈ 16 ರಾಜಕೀಯ ಪಕ್ಷಗಳು, ಮಧ್ಯಪ್ರದೇಶದ ಅತೇರ್ ಕ್ಷೇತ್ರದ ಮತಯಂತ್ರಗಳ ಪರೀಕ್ಷಾರ್ಥ ಪ್ರಯೋಗದ ವೇಳೆ ಬಿಜೆಪಿ ಪರವಾಗಿ ಮತ ಚಲಾವಣೆಯಾಗುವಂತೆ ಮಾಡಿದ್ದನ್ನೂ ಉಲ್ಲೇಖಿಸಿವೆ.

ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮತಯಂತ್ರಗಳ ದುರ್ಬಳಕೆ ನಡೆದಿದೆ. ಉತ್ತರ ಅಮೆರಿಕ ಹಾಗೂ ಯೂರೋಪ್‌ನ ಹಲವು ದೇಶಗಳು ಮತ್ತೆ ಮತಪತ್ರಕ್ಕೇ ಮರಳಿರುವುದನ್ನೂ ಉಲ್ಲೇಖಿಸಲಾಗಿದೆ.
ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ವಿವಿಪಿಎಟಿ ಯಂತ್ರ ಅಳವಡಿಸಿ, ಮತ ಹಾಕಿದ ವ್ಯಕ್ತಿಗೆ ಆ ಮತದ ಮುದ್ರಿತ ಪ್ರತಿಯನ್ನು ನೋಡಿ ಖಾತ್ರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬ ಸುಪ್ರೀಂಕೋರ್ಟ್ ಸಲಹೆಯನ್ನು ಸರ್ಕಾರ ಅನುಷ್ಠಾನಕ್ಕೆ ತರಲು ನಿರ್ಲಕ್ಷ್ಯ ವಹಿಸಿದೆ ಎಂದು ಆಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News