×
Ad

ಭಾರತೀಯ ಜಾಧವ್‌ಗೆ ಪಾಕ್ ಮರಣದಂಡನೆ ವಿಧಿಸಿದ್ದರೆ ನಾವು ಪಾಕ್ ಏಜೆಂಟ್‌ನನ್ನು ಹೇಗೆ ನೋಡಿಕೊಳ್ಳುತ್ತಿದ್ದೇವೆ...ಗೊತ್ತಾ?

Update: 2017-04-11 14:24 IST
ಸಾಜಿದ್ ಮುನೀರ್

ಭೋಪಾಲ,ಎ.11: ಪಾಕಿಸ್ತಾನದ ಸೇನಾ ನ್ಯಾಯಾಲಯವು ಬೇಹುಗಾರಿಕೆಯ ಆರೋಪದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ಅವರಿಗೆ ಮರಣದಂಡನೆಯನ್ನು ವಿಧಿಸಿದ್ದರೆ ಇತ್ತ ಭೋಪಾಲದ ಪೊಲೀಸರು ಪಾಕಿಸ್ತಾನಿ ಬೇಹುಗಾರ ಸಾಜಿದ್ ಮುನೀರ್ ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾದಾಗಿನಿಂದಲೂ ಆತನನ್ನು ವಸತಿ,ಊಟದೊಂದಿಗೆ ರಾಜಾತಿಥ್ಯ ನೀಡಿ ಸಾಕುತ್ತಿದ್ದಾರೆ...!

  ಬೇಹುಗಾರಿಕೆ ಆರೋಪದಲ್ಲಿ ಮುನೀರ್‌ಗೆ 12 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಆತ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಆತನನ್ನು ಗಡಿಪಾರು ಮಾಡುವ ಭಾರತದ ಮನವಿಗಳಿಗೆ ಪಾಕಿಸ್ತಾನವು ಸ್ಪಂದಿಸಿರಲಿಲ್ಲ. ಹೀಗಾಗಿ ಆತನ ಹೊಣೆ ಭೋಪಾಲ ಪೊಲೀಸರ ಹೆಗಲಿಗೇರಿದ್ದು, ಭೋಪಾಲ ಜಿಲ್ಲಾ ಸ್ಪೆಷಲ್ ಬ್ರಾಂಚ್ (ಡಿಎಸ್‌ಬಿ) ಕಳೆದ 10 ತಿಂಗಳುಗಳಿಂದಲೂ ಆತನನ್ನು ಸಾಕುತ್ತಿದೆ. ಕೊಹ್-ಎ-ಫಿಝಾ ಪೊಲಿಸ್ ಠಾಣೆ ಸಮೀಪದ, ಸರೋವರಗಳ ನಗರವೆಂದೇ ಕರೆಯಲ್ಪಡುವ ಭೋಪಾಲದ ಅತ್ಯಂತ ರಮಣೀಯ ಸ್ಥಳವೊಂದರಲ್ಲಿ ಆತನ ವಾಸಕ್ಕೆ ಅನುವು ಮಾಡಿಕೊಡಲಾಗಿದೆ. ಆತನ ಆಹಾರ,ಇನ್ನಿತರ ಅಗತ್ಯಗಳಿಗಾಗಿ ಡಿಸಿಬಿ ಹಣ ಪಾವತಿಸು ತ್ತಿದೆ.

ಮುನೀರ್‌ನ ಗಡಿಪಾರು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭೋಪಾಲ ಪೊಲೀಸರು ಪೊಲೀಸ್ ಮುಖ್ಯಕಚೇರಿಗೆ ಪದೇ ಪದೇ ಮನವಿಗಳನ್ನು ಮಾಡಿಕೊಂಡಿದ್ದಾ ರಾದರೂ ಯಾವುದೇ ಪ್ರಯೋಜನವಾಗಿಲ್ಲ.

 ಐಎಸ್‌ಐಗಾಗಿ ಭೋಪಾಲದಲ್ಲಿಯ ಸೇನಾ ನೆಲೆಗಳ ಬೇಹುಗಾರಿಕೆ ನಡೆಸಿದ್ದಕ್ಕಾಗಿ 12 ವರ್ಷಗಳ ಜೈಲುಶಿಕ್ಷೆಯ ಬಳಿಕ ಕಳೆದ ವರ್ಷದ ಜೂ.5ರಂದು ಮುನೀರ್‌ನನ್ನು ಬಿಡುಗಡೆಗೊಳಿಸಲಾಗಿತ್ತು. ನಿರ್ದಿಷ್ಟ ಗುಪ್ತಚರ ಮಾಹಿತಿಗಳ ಮೇರೆಗೆ 2004ರಲ್ಲಿ ರಹಸ್ಯ ರಕ್ಷಣಾ ದಾಖಲೆಗಳನ್ನು ಸಾಗಿಸುತ್ತಿದ್ದಾಗ ಭೋಪಾಲದಲ್ಲಿ ಆತನನ್ನು ಬಂಧಿಸಲಾಗಿತ್ತು.

ತನ್ನ ಸೋದರನ ಕೊಲೆಗೆ ಪ್ರತಿಯಾಗಿ ಕರಾಚಿಯ ಯುವಕನೋರ್ವನನ್ನು ಹತ್ಯೆಗೈದಿದ್ದ ಮುನೀರ್ ಅಲ್ಲಿಯ ಪೊಲೀಸರಿಂದ ಬಂಧನವನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿ ದ್ದಾಗ ಐಎಸ್‌ಐ ಅಧಿಕಾರಿಯೋರ್ವನ ಸಂಪರ್ಕಕ್ಕೆ ಬಂದಿದ್ದ. ಭಾರತದಲ್ಲಿ ತನಗಾಗಿ ಬೇಹುಗಾರಿಕೆ ನಡೆಸಿದರೆ ಕರಾಚಿ ಪೊಲೀಸರಿಂದ ರಕ್ಷಿಸುವುದಾಗಿ ಆತ ಭರವಸೆ ನೀಡಿದ್ದ. ಹೀಗಾಗಿ ಮುನೀರ್ ಭಾರತದೊಳಕ್ಕೆ ನುಸುಳಿ ಬೇಹುಗಾರಿಕೆಯಲ್ಲಿ ತೊಡಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News