ಉತ್ತರಪ್ರದೇಶದಲ್ಲಿ ಸಮಯ ಪಾಲಿಸದ ಸರಕಾರಿ ಉದ್ಯೋಗಿಗಳ ದಿನದ ಸಂಬಳ ಕಟ್
ಲಕ್ನೊ,ಎ. 11: ಉತ್ತರಪ್ರದೇಶದ ವಿವಿಧ ಸರಕಾರಿ ಕಚೇರಿಗಳಲ್ಲಿ ಸಮಯಕ್ಕೆ ಸರಿಯಾಗಿ ತಲುಪದ ಸರಕಾರಿ ನೌಕರರ ಸಂಬಳವನ್ನು ತಡೆಹಿಡಿಯಲು ಸಚಿವರು ಆದೇಶ ಹೊರಡಿಸಿದ್ದಾರೆ. ಕೃಷಿಖಾತೆಯ ಉದ್ಯೋಗಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್‌ರ ಸೂಚನೆಯಂತೆ ಕೃಷಿ ಸಚಿವ ಸೂರ್ಯ ಪ್ರತಾಪ್ ಸಾಹಿ ಮಿಂಚಿನ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಸರಕಾರಿ ಅಧಿಕಾರಿಗಳು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪದಿರುವುದು ಪತ್ತೆಯಾಗಿತ್ತು. ಸೋಮವಾರ ಸೂರ್ಯಪ್ರತಾಪ್ ಸಾಹಿ ಬೆಳಗ್ಗೆ ಹತ್ತುಗಂಟೆಗೆ ದಾಳಿ ನಡೆಸಿದ್ದರು. ಕಚೇರಿಗಳಲ್ಲಿ ಖಾಲಿ ಕುರ್ಚಿಗಳು ಅವರನ್ನು ಸ್ವಾಗತಿಸಿದ್ದವು. ನಂತರ ಇವರ ಒಂದು ದಿವಸದ ಸಂಬಳ ತಡೆಹಿಡಿಯಲು ಸಚಿವರು ಆದೇಶಿಸಿದರು.
ಕೃಷಿ ಸಚಿವರಂತೆ ಅಲ್ಪಸಂಖ್ಯಾತ ವಿಭಾಗದ ಸಚಿವ ಮೊಹ್ಸಿನ್ ರಾಝ ಕೂಡಾ ತನ್ನ ಖಾತೆಗೆ ಸಂಬಂಧಿಸಿದ ಕಚೇರಿಗಳಿಗೆ ಮಿಂಚಿನದಾಳಿ ನಡೆಸಿದ್ದಾರೆ. ಮೊಹ್ಸಿನ್ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿಲ್ಲದ್ದು, ಹಲವು ಕೋಣೆಗಳಲ್ಲಿ ಏಸಿ, ಫ್ಯಾನ್ ಅನವಶ್ಯಕವಾಗಿ ಸುಮ್ಮನೆ ತಿರುಗುತ್ತಿದ್ದುದನ್ನು ನೋಡಿದ್ದರು. ವಿದ್ಯುತ್ ಪೋಲು ಮಾಡಿದ್ದಕ್ಕಾಗಿ ಅವರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಸರಕಾರಿ ನೌಕರರ ನಿರ್ಲಕ್ಷ್ಯ ಅಪಾರವಾಗಿದೆ. ಇಂತಹವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಕೃಷಿ ಸಚಿವ ಸಾಹಿ ಹೇಳಿದರು.
ಮುಂಬರುವ ದಿನಗಳಲ್ಲಿ ಸರಕಾರಿ ಕಚೇರಿಗಳಲ್ಲಿ ತಪಾಸಣೆ ಮುಂದುವರಿಯಲಿದೆ. ಅಧಿಕಾರಿಗಳು 18ರಿಂದ 20 ಗಂಟೆವೆರೆಗೆ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಯಾಗಿ ಹೊಣೆ ವಹಿಸಿಕೊಂಡ ಕೂಡಲೇ ಆದಿತ್ಯನಾಥ್ ಆಗ್ರಹಿಸಿದರು.