ಆರೆಸ್ಸೆಸ್ ಮುಖವಾಣಿ ‘ರಾಷ್ಟ್ರ ಧರ್ಮ’ ಡಿಎವಿಪಿ ಜಾಹೀರಾತಿಗೆ ಅನರ್ಹ
Update: 2017-04-11 18:17 IST
ಹೊಸದಿಲ್ಲಿ,ಎ.11: ಆರೆಸ್ಸೆಸ್‌ನ ಮುಖವಾಣಿ ‘ರಾಷ್ಟ್ರ ಧರ್ಮ ’ಮಾಸಿಕವನ್ನು ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿಎವಿಪಿ)ದ ನೋಂದಣಿ ಪಟ್ಟಿಯಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ ಅದು ಕೇಂದ್ರ ಸರಕಾರದ ಜಾಹೀರಾತುಗಳನ್ನು ಪಡೆಯಲು ಅನರ್ಹಗೊಂಡಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಡಿಎವಿಪಿಯಲ್ಲಿ ನೋಂದಣಿಯಾಗಿರುವ ಪತ್ರಿಕೆಗಳು ಸರಕಾರಿ ಜಾಹೀರಾತುಗಳನ್ನು ಪಡೆಯಲು ಅರ್ಹ ವಾಗಿರುತ್ತವೆ.
1947 ರಲ್ಲಿ ಆರಂಭಗೊಂಡಿದ್ದ ರಾಷ್ಟ್ರ ಧರ್ಮ ಲಕ್ನೋದಿಂಂದ ಪ್ರಕಟಗೊಳ್ಳುತ್ತದೆ.
2016,ಅಕ್ಟೋಬರ್‌ನಿಂದ 2017,ಫೆಬ್ರವರಿವರೆಗಿನ ಮಾಸಿಕ ಸಂಚಿಕೆಗಳನ್ನು ಸಲ್ಲಿಸುವಲ್ಲಿ ವಿಫಲಗೊಂಡಿದ್ದಕ್ಕಾಗಿ ರಾಷ್ಟ್ರಧರ್ಮ ಸೇರಿದಂತೆ 804 ಪತ್ರಿಕೆಗಳು/ನಿಯತ ಕಾಲಿಕಗಳನ್ನು ಅಮಾನತುಗೊಳಿಸಲಾಗಿದೆ ಎಂದು ಡಿಎಪಿಪಿ ಹೇಳಿದೆ.
ಈ ಅಮಾನತು ತಾತ್ಕಾಲಿಕವಾಗಿದ್ದು, ಈ ಪತ್ರಿಕೆಗಳು ನಿಯಮಗಳನ್ನು ಅನುಸರಿಸಿದರೆ ಅಮಾನತನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೋರ್ವರು ತಿಳಿಸಿದರು.