ದಿಲ್ಲಿಯಲ್ಲಿ ಬಿಜೆಪಿಗೆ ಮುಖಭಂಗ
ಹೊಸದಿಲ್ಲಿ,ಎ.12 : ಕೊಳೆಗೇರಿ ಪ್ರದೇಶದ ಅಭ್ಯರ್ಥಿ ಎಂದು ಬಿಜೆಪಿ ಪ್ರಚಾರ ಮಾಡಿದ ಮಹಿಳೆಯೊಬ್ಬಳು ವಾಸ್ತವವಾಗಿ ಕೋಟ್ಯಧೀಶೆ ಎಂದು ಬಹಿರಂಗಗೊಳ್ಳುತ್ತಿದ್ದಂತೆಯೇ ಪಕ್ಷ ತೀವ್ರ ಮುಖಭಂಗಕ್ಕೊಳಗಾಗಿದೆ. ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಇತ್ತೀಚೆಗೆ ಎಂಸಿಡಿ ಚುನಾವಣೆಗಾಗಿ ಸುನೀತಾ ಕೌಶಿಕ್ ಎಂಬಾಕೆಯನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಎಎಪಿ ಬಲಿಷ್ಠವಾಗಿರುವ ಕಡೆಗಳಲ್ಲಿರುವ ಕೊಳೆಗೇರಿಗಳಲ್ಲಿ ಬಿಜೆಪಿಗೆ ಬೆಂಬಲ ಪಡೆಯುವುದಕ್ಕಾಗಿ ಆ ಪ್ರದೇಶಗಳಲ್ಲಿ ರಾತ್ರಿ ತಂಗುತ್ತಿದ್ದ ತಿವಾರಿ ತಮ್ಮ ಪ್ರಚಾರ ಸಂದರ್ಭ ಈ ಮಹಿಳೆಯನ್ನು ಭೇಟಿಯಾಗಿದ್ದರು ಹಾಗೂ ಆಕೆಯನ್ನು ಇಂದರ್ ಪುರಿ ವಾರ್ಡ್ ನಿಂದ ಸ್ಫರ್ಧೆಗಿಳಿಸಿದ್ದರಲ್ಲದೆ ಆಕೆ ಕೊಳೆಗೇರಿ ಪ್ರದೇಶದ ಅಭ್ಯರ್ಥಿ ಎಂದು ಪ್ರಚಾರ ಪಡಿಸಿದ್ದರು.
ಆದರೆ ಆಕೆ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್ ನಲ್ಲಿ ಆಕೆ ಒಟ್ಟು ರೂ 90 ಲಕ್ಷ ಮೌಲ್ಯದ ಎರಡು ಮನೆಗಳು ಹಾಗೂ ಚಿನ್ನಾಭರಣಗಳನ್ನು ಹೊಂದಿದ್ದಾಳೆ ಎಂಬುದು ಬಹಿರಂಗಗೊಂಡಿದ್ದೇ ತಡ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
‘‘ಕೊಳೆಗೇರಿ ಅಭ್ಯರ್ಥಿ ಎಂದು ಹೇಳಿಕೊಂಡು ತಿವಾರಿ ಕೋಟ್ಯಧೀಶೆಗೆ ಟಿಕೆಟ್ ನೀಡಿದೆ. ಕೋಟ್ಯಧೀಶೆಯೊಬ್ಬರು ಚುನಾವಣೆ ಸ್ಪರ್ಧಿಸುವುದು ಅಪರಾಧವಲ್ಲದೇ ಇದ್ದರೂ ಬಿಜೆಪಿಯ ಚುನಾವಣಾ ಸ್ಟಂಟ್ ಅನ್ನು ಟೀಕಿಸಬೇಕಿದೆ,’’ ಎಂದು ಎಎಪಿ ದಿಲ್ಲಿ ವಿಭಾಗದ ಸಂಚಾಲಕ ದಿಲೀಪ್ ಪಾಂಡೆ ಹೇಳಿದ್ದರು.
ಬಿಜೆಪಿ ಅಭ್ಯರ್ಥಿ ಸುನೀತಾ ಕೌಶಿಕ್ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಆಕೆಯ ಬಳಿ 720 ಚದರ ಅಡಿ ಹಾಗೂ 553 ಚದರ ಅಡಿಯ ಎರಡು ಕಟ್ಟಡಗಳಿದ್ದು ಇವುಗಳ ಮಾರುಕಟ್ಟೆ ಮೌಲ್ಯ ಕ್ರಮವಾಗಿ ರೂ 50 ಲಕ್ಷ ಹಾಗೂ ರೂ 32 ಲಕ್ಷ ಆಗಿದೆ. ಆಕೆಯ ಪತಿ ಶಿಶಿ ಭೂಷಣ್ ಬಳಿ ರೂ 10 ಲಕ್ಷ ಮೌಲ್ಯದ ಆಸ್ತಿಯಿದ್ದು ದಂಪತಿ ರೂ 7 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಇದರಲ್ಲಿ ಸುನೀತಾ ಬಳಿಯಿರುವ ಚಿನ್ನಾಭರಣಗಳ ಮೌಲ್ಯ ರೂ 6 ಲಕ್ಷ ಆಗಿದೆ.