ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಯೋಧರ ಮೇಲೆ ಹಲ್ಲೆ: ದೇಶಾದ್ಯಂತ ಆಕ್ರೋಶ
Update: 2017-04-12 23:28 IST
ಶ್ರೀನಗರ, ಎ.12: ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಸಿಆರ್ ಪಿಎಫ್ ಯೋಧರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಯೋಧರ ಮೇಲೆ ನಡೆದ ದೌರ್ಜನ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಕೆಲ ಸಿಆರ್ ಪಿಎಫ್ ಯೋಧರು ಬುಡ್ಗಾಂ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದು, ಅವರು ರಸ್ತೆಯಲ್ಲಿ ನಡೆಯುತ್ತಿರುವ ಸಂದರ್ಭ ಕೆಲ ಯುವಕರು ಅವರನ್ನು ಸುತ್ತುವರಿದು ನಿಂದಿಸಿ, ತುಳಿದು ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಯೋಧರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಐವರ ಬಂಧನ: ಯೋಧರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಬುಡ್ಗಾಂ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಐವರನ್ನು ಬಂಧಿಸಲಾಗಿದೆ.