×
Ad

ಮನೆಬಾಗಿಲಿಗೆ ಬಂದ ಅಪಾಯಕಾರಿ ಅತಿಥಿಯನ್ನು ಕಂಡು ಹೌಹಾರಿದರು!

Update: 2017-04-13 13:27 IST

ತಿರುಚ್ಚಿ, ಎ.13: ಬುಧವಾರ ಬೆಳಗ್ಗೆ ತಂಜಾವೂರು ಸಮೀಪದ ವಡುಗಕುಡಿ ಕೊಳ್ಳಿದಂ ಗ್ರಾಮದ ವಿನ್ಸೆಂಟ್ ಎಂಬವರ ಕುಟುಂಬ ಸದಸ್ಯರು ಮನೆಯ ಮುಂಬಾಗಿಲನ್ನು ತೆರೆದಾಗ ಅಲ್ಲೊಂದು ಅನಿರೀಕ್ಷಿತ ಅತಿಥಿಯನ್ನು ನೋಡಿ ದಂಗಾಗಿ ಬಿಟ್ಟಿದ್ದರು. ಕಾರಣ ಅಲ್ಲಿದ್ದದ್ದು, ಸಂಬಂಧಿಕರೋ, ಪರಿಚಯಸ್ಥರೋ ಅಲ್ಲ. ಬದಲಾಗಿ, ಏಳು ಅಡಿ ಉದ್ದದ ಮೊಸಳೆ!.

ಈ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಮೊಸಳೆಗಳು ಅಪರೂಪವೇನಲ್ಲವಾದರೂ ಮನೆ ಬಾಗಿಲಿಗೆ ಮೊಸಳೆ ಬಂದಿದ್ದು ಇದೇ ಮೊದಲ ಬಾರಿಯಾಗಿದೆ. ಮೊಸಳೆಯನ್ನು ಕಂಡ ಕೂಡಲೇ ವಿನ್ಸೆಂಟ್ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಾಯದೊಂದಿಗೆ ಮೊಸಳೆಯನ್ನು ರಕ್ಷಿಸಿದ್ದಾರೆ.

ವಡುಗಕುಡಿ ಸಮೀಪವಿರುವ ಟ್ಯಾಂಕ್ ಒಂದರಲ್ಲಿ ಕೆಲ ಮೊಸಳೆಗಳಿದ್ದು ಅಲ್ಲಿಂದ ಒಂದು ಮೊಸಳೆ ತಪ್ಪಿಸಿಕೊಂಡು ಇಲ್ಲಿಗೆ ಬಂದಿರುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಈ ಟ್ಯಾಂಕ್ ನಲ್ಲಿ ಸ್ವಲ್ಪ ನೀರಿದ್ದರೂ ಈ ಬಾರಿ ಅದು ಬರಿದಾಗಿದ್ದರಿಂದ ಮೊಸಳೆಗಳು ವಾಸಿಸಲು ಸೂಕ್ತ ಸ್ಥಳಕ್ಕಾಗಿ ಅಲೆದಾಡಿರಬಹುದೆಂದು ಶಂಕಿಸಲಾಗಿದೆ.

ರಾತ್ರಿ ಹೊತ್ತು ಹೀಗೆ ಟ್ಯಾಂಕಿನಿಂದ ಹೊರ ಬಂದ ಮೊಸಳೆ ವಿನ್ಸೆಂಟ್ ಅವರ ಮನೆ ಬಾಗಿಲಿಗೆ ಬಂದಿರಬಹುದೆಂದು ಹೇಳಿರುವ ಅರಣ್ಯಾಧಿಕಾರಿಗಳು, ಸ್ಥಳೀಯರು ಸಂಜೆ ಹಾಗೂ ಮುಂಜಾನೆಯ ಹೊತ್ತು ಹೊರ ಹೋಗುವಾಗ ಎಚ್ಚರಿಕೆಯಿಂದಿರಬೇಕೆಂದು ಹೇಳಿದ್ದಾರೆ. ರಕ್ಷಿಸಿದ ಮೊಸಳೆಯನ್ನು ಕಾವೇರಿ ಮತ್ತು ಕೊಲ್ಲಿದಂ ನದಿಗಳ ಸಂಗಮ ಸ್ಥಳವಾಗಿರುವ ತಿರುಚ್ಚಿಯ ಮುಕ್ಕೊಂಬು ಸಮೀಪ ನೀರಿಗೆ ಬಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News