ಆದಾಯ ತೆರಿಗೆ ದಾಳಿ ತಡೆಯಲು ಯತ್ನ: ತಮಿಳ್ನಾಡಿನ ಇಬ್ಬರು ಸಚಿವರ ವಿರುದ್ಧ ಕೇಸು
ಚೆನ್ನೈ, ಎ.13: ತಮಿಳ್ನಾಡಿನ ಆರೋಗ್ಯಸಚಿವ ವಿಜಯಭಾಸ್ಕರ್ ಮನೆಗೆ ನಡೆಸಲಾದ ದಾಳಿಯನ್ನೇ ತಡೆಯಲು ಯತ್ನಿಸಿದ ಇಬ್ಬರು ತಮಿಳ್ನಾಡಿನ ಸಚಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ತಮಿಳ್ನಾಡಿನ ವಸತಿ ಸಚಿವ ದುಮಲೈ ಕೆ. ರಾಧಾಕೃಷ್ಣನ್, ಆಹಾರ ಸಚಿವ ಕಾಮರಾಜ್ ವಿರುದ್ಧ ಆದಾಯತೆರಿಗೆ ಅಧಿಕಾರಿಗಳನ್ನು ತಡೆಯಲು ಯತ್ನಿಸಿದ್ದಾರೆಂದು ಕೇಸು ದಾಖಲಿಸಲಾಗಿದೆ.
ಎಂಜಿಆರ್ ಯುನಿವರ್ಸಿಟಿಯ ಉಪಕುಲಪತಿ ಮನೆಗೂ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಏಳು ಗಂಟೆಗೂ ಹೆಚ್ಚು ಸಮಯದ ಪರಿಶೀಲನೆಯಲ್ಲಿ ಎರಡು ಕೆ.ಜಿ. ಬಂಗಾರದ ಆಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಮಿಳುಚಿತ್ರನಟ ಶರತ್ ಕುಮಾರ್ ಮನೆಗೂ ದಾಳಿ ನಡೆಸಲಾಗಿದ್ದು, ಅವರು ಐದು ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ ನಡೆಸಿದ್ದಾರೆಂದು ಕೆಲವು ವರದಿಗಳು ತಿಳಿಸಿವೆ. ತಮಿಳ್ನಾಡಿನ ಆರ್‌ಕೆ ನಗರ ಉಪಚುನಾವಣೆಗೆ ಪೂರ್ವಭಾವಿಯಾಗಿ ಆದಾಯ ತೆರಿಗೆ ಇಲಾಖೆ ತಮಿಳ್ನಾಡಿನಲ್ಲಿ ವ್ಯಾಪಕ ದಾಳಿ ನಡೆಸಿತ್ತು. ವ್ಯಾಪಕ ಹಣ ಹಂಚಲಾಗಿದೆ ಎನ್ನುವ ಆರೋಪದಲ್ಲಿ ಆರ್‌ಕೆ ನಗರ ಉಪಚುನಾವಣೆಯನ್ನೇ ಚುನಾವಣಾ ಆಯೋಗ ರದ್ದುಪಡಿಸಿದೆ.