×
Ad

ಊಟಕ್ಕೆ ಒಂದು ಬ್ರೆಡ್, ಕುಡಿಯಲು ಟಾಯ್‌ಲೆಟ್‌ನ ನೀರು

Update: 2017-04-13 19:44 IST

ಚೆನ್ನೈ, ಎ.13: ವಿದೇಶದಲ್ಲಿ ಉದ್ಯೋಗ, ಕೈತುಂಬಾ ಸಂಬಳ.. ಈ ಆಮಿಷವೊಡ್ಡಿದ ವ್ಯಕ್ತಿಯ ಮಾತಿನ ಬಲೆಗೆ ಸಿಲುಕಿ, ವಿದೇಶದಲ್ಲಿ ನರಕಯಾತನೆ ಅನುಭವಿಸಿದ ತಮಿಳುನಾಡಿನ 15 ಮೀನುಗಾರರು ಕಡೆಗೂ ದೇಶಕ್ಕೆ ಮರಳಿದ್ದಾರೆ.

 ಬಹರೈನ್‌ನಲ್ಲಿ ಮೀನುಗಾರಿಕಾ ದೋಣಿಯಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ . ಆಕರ್ಷಕ ಸಂಬಳ ನೀಡಲಾಗುವುದು ಎಂಬ ಜಾಹೀರಾತಿನ ಹಿನ್ನೆಲೆಯಲ್ಲಿ ತಮಿಳುನಾಡಿನ 15 ಮೀನುಗಾರರು ಅರ್ಜಿ ಹಾಕಿದ್ದರು. ವೀಸಾ ಶುಲ್ಕ ಹಾಗೂ ಕೆಲಸಕ್ಕೆ ಸೇರಿಸಿದ ಏಜೆನ್ಸಿಯ ಕಮಿಷನ್.. ಸೇರಿ ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಇವರು ನೀಡಿ ವಿದೇಶಕ್ಕೆ ತೆರಳಿದ್ದರು.

 ಅಲ್ಲಿ ಹೋದ ಮೇಲೆ ಇವರಿಗೆ ವಾಸ್ತವತೆಯ ಅರಿವಾಗಿತ್ತು. ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಇವರು ಎಷ್ಟು ಮೀನು ಹಿಡಿದು ತರುತ್ತಾರೋ ಅದರ ಆಧಾರದಲ್ಲಿ ಇವರ ಸಂಬಳ ನಿಗದಿಯಾಗಿತ್ತು.

  ಈ ಮಧ್ಯೆ ಒಂದು ದಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಇರಾನ್ ಸಾಗರವ್ಯಾಪ್ತಿ ಪ್ರವೇಶಿಸಿದರೆಂಬ ಕಾರಣ ನೀಡಿ ತಮಿಳುನಾಡಿನ 15 ಮಂದಿ ಮೀನುಗಾರರನ್ನು ಇರಾನ್ ಸರಕಾರ ಬಂಧಿಸಿತ್ತು. ಆರಂಭದ ಕೆಲವು ದಿನ ಇವರನ್ನು ಇರಾನ್‌ನಲ್ಲಿ ಬಂಧಿಸಿಡಲಾಗಿತ್ತು. ಆ ಬಳಿಕ ಕಡಲ ತೀರದಲ್ಲಿದ್ದ ಬೋಟ್‌ಗೆ ಇವರನ್ನು ವರ್ಗಾಯಿಸಲಾಯಿತು.

  ಕನಿಷ್ಟ ಪ್ರಮಾಣದ ಆಹಾರ ನೀಡುತ್ತಿದ್ದರು. ಕೆಲವೊಮ್ಮೆ ಒಂದು ತುಂಡು ಬ್ರೆಡ್ ಮಾತ್ರ ಸಿಗುತ್ತಿತ್ತು. ಟಾಯ್‌ಲೆಟ್‌ನಲ್ಲಿದ್ದ ನೀರನ್ನು ಕುಡಿಯುವಂತೆ ಬಲವಂತ ಮಾಡಲಾಗುತ್ತಿತ್ತು. ನಿದ್ದೆ ಮಾಡಲೂ ಬಿಡುತ್ತಿರಲಿಲ್ಲ. ಸದಾ ಎಚ್ಚರದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಉಪವಾಸವೇ ಗತಿ ಆಗುತ್ತಿತ್ತು ಎನ್ನುತ್ತಾರೆ ಇರಾನ್‌ನಲ್ಲಿ ಬಂಧಿಸಲ್ಪಟ್ಟು ಇದೀಗ ಸ್ವದೇಶಕ್ಕೆ ವಾಪಸಾಗಿರುವ ತಮಿಳುನಾಡಿನ ಮೀನುಗಾರ ಎಸ್.ಜಾರ್ಜ್. ಈ ಅತಂತ್ರ ಸ್ಥಿತಿಯಲ್ಲೇ ಇವರು 6 ತಿಂಗಳು ಇರಾನ್‌ನಲ್ಲಿ ಕಳೆದಿದ್ದರು.

ನನ್ನ ಪತ್ನಿ ಮತ್ತು ಮಕ್ಕಳ ಮುಖವನ್ನು ಮರಳಿ ನೋಡುವ ಭರವಸೆ ಇರಲಿಲ್ಲ. ಕಳೆದ ಆರು ತಿಂಗಳು ಅವರೊಂದಿಗೆ ಸಂಪರ್ಕವೇ ಇರಲಿಲ್ಲ ಎಂದು ಅವರು ಥಾಮ್ಸನ್ ರಾಯ್ಟರ್ಸ್ ಪ್ರತಿಷ್ಠಾನದೊಂದಿಗೆ ಮಾತನಾಡುತ್ತಾ ತಿಳಿಸಿದರು.

 ಭವಿಷ್ಯದ ಜೀವನಕ್ಕೆ ಒಂದಿಷ್ಟು ಹಣ ಉಳಿಸುವ ಇರಾದೆಯೊಂದಿಗೆ ವಿದೇಶದ ಕೆಲಸಕ್ಕೆ ಸೇರಿಕೊಂಡಿದ್ದ ಈ ಮೀನುಗಾರರು ಈಗ ಉಳಿತಾಯ ಹಾಗಿರಲಿ, ಲಕ್ಷಾಂತರ ರೂಪಾಯಿ ಸಾಲದ ಹೊರೆಯಲ್ಲಿ ಸಿಲುಕಿದ್ದಾರೆ. ವಿದೇಶಕ್ಕೆ ತೆರಳಲು ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲೇ ಈಗ ದಿನ ಕಳೆಯುತ್ತಿದ್ದೇವೆ ಎನ್ನುತ್ತಾರೆ ಜಾರ್ಜ್.

ಆದರೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರಿ ಕಚೇರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ.

ಬಹರೈನ್, ಕುವೈಟ್, ಕತ್ತರ್, ಸೌದಿ ಅರೆಬಿಯಾ, ಯುಎಇ ಮತ್ತು ಒಮನ್.. ಈ ಆರು ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 6 ಮಿಲಿಯನ್ ಭಾರತೀಯ ವಲಸಿಗರು ಇದ್ದಾರೆ. ಇವರಲ್ಲಿ ಬಹುತೇಕ ಮಂದಿಗೆ ಅಲ್ಲಿಗೆ ತೆರಳಿದ ಬಳಿಕ ತಾವು ಮೋಸಹೋಗಿರುವುದು ತಿಳಿದು ಬಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.

    ಇನ್ನೂ 24 ಮೀನುಗಾರರ ತಂಡವೊಂದು ಇದೇ ರೀತಿ ಅಲ್ಲಿ ಸಿಲುಕಿಕೊಂಡಿದೆ. ಹೆಚ್ಚಿನ ವರಿಗೆ ತಾವು ಯಾವ ವೀಸಾದಲ್ಲಿ ಪ್ರಯಾಣಿಸುತ್ತಿದ್ದೇವೆ, ಕೆಲಸ ಮಾಡುವ ಸ್ಥಳ ಹೇಗಿದೆ ಇತ್ಯಾದಿ ವಿಷಯಗಳ ಮಾಹಿತಿ ಕೂಡಾ ತಿಳಿದಿಲ್ಲ ಎನ್ನುತ್ತಾರೆ ಚೆನ್ನೈ ಮೂಲದ ‘ದೇಶೀಯ ಕಾರ್ಮಿಕರ ರಾಷ್ಟ್ರೀಯ ಆಂದೋಲನ’ದ ಜೋಸೆಫಿನ್ ವಲರ್‌ಮತಿ.

     2015ರ ತಮಿಳುನಾಡು ವಲಸೆ ಸಮೀಕ್ಷೆ ಪ್ರಕಾರ ರಾಜ್ಯದ ಪ್ರತೀ ಹತ್ತು ಕುಟುಂಬದಲ್ಲಿ ಒಂದು ಕುಟುಂಬದಿಂದ ಒಬ್ಬರು ಅಥವಾ ಹೆಚ್ಚು ಮಂದಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ವಲಸೆ ಹೋಗುವ ವ್ಯಕ್ತಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸುಮಾರು 1 ಲಕ್ಷ ರೂ. ವೆಚ್ಚ ಮಾಡುತ್ತಾನೆ. ಇದರಲ್ಲಿ ಅರ್ಧ ಮೊತ್ತ ಕೆಲಸ ದೊರಕಿಸಿಕೊಟ್ಟ ಏಜೆನ್ಸಿಗೆ ಸಂದಾಯವಾದರೆ, ಉಳಿದ ಮೊತ್ತ ವೀಸಾದ ಮತ್ತು ಪ್ರಯಾಣದ ಖರ್ಚು ಆಗಿರುತ್ತದೆ. ಈ ಸಮೀಕ್ಷೆಯಲ್ಲಿ ಒಳಗೊಂಡ 20000 ಕುಟುಂಬಗಳ ಶೇ.39ರಷ್ಟು ಮಹಿಳೆಯರು ಮತ್ತು ಶೇ.21ರಷ್ಟು ಪುರುಷರು ತಮಗೆ ಭರವಸೆ ನೀಡಿದಷ್ಟು ಸಂಬಳ ದೊರಕುತ್ತಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News