ತುಳುನಾಡಿನ ಸೌಹಾರ್ದಕ್ಕೆ ಸಾಕ್ಷಿ ಮದಿಪು

Update: 2017-04-14 16:32 GMT

ಆಸ್ಥಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ಮದಿಪು’ ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್ ಮುಂಡಾಡಿ ನಡೆಸಿದ್ದು, ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಪಕರು. ಕ್ರಿಯಾತ್ಮಕ ನಿರ್ದೇಶನದಲ್ಲಿ ಸುಧೀರ್ ಶಾನ್‌ಬೋಗ್, ಸಹ ನಿರ್ದೇಶನ ಶರತ್ ಕುಮಾರ್ ಮತ್ತು ವಿಶಾಲ್ ಕುಮಾರ್ ಸಹಕರಿಸಿದ್ದಾರೆ. ಸಂಗೀತ ಮನೋಹರ್ ವಿಠ್ಠಲ್ ನೀಡಿದ್ದು, ಸಂಕಲನವನ್ನು ಶ್ರೀಕಾಂತ್, ಛಾಯಾಗ್ರಹಣ ಗಣೇಶ್ ಹೆಗಡೆ, ಸಂಭಾಷಣೆ ಜೋಗಿ, ತುಳು ಸಂಭಾಷಣೆ ಚಂದ್ರನಾಥ್ ಬಜಗೋಳಿ ನಡೆಸಿದ್ದರು. ಎಂ.ಕೆ.ಮಠ, ಸರ್ದಾರ್ ಸತ್ಯ, ಸೀತಾಕೋಟೆ, ಸುಜಾತಾ ಶೆಟ್ಟಿ, ಚೇತನ್ ರೈ ಮಾಣಿ, ಜೆ.ಬಂಗೇರ, ನಾಗರಾಜ್ ರಾವ್, ದಯಾನಂದ್ ಕತ್ತಲ್‌ಸರ್, ರಮೇಶ್ ರೈ ಕುಕ್ಕುವಳ್ಳಿ, ಯುವರಾಜ್ ಕಿಣಿ, ಡಾ. ಜೀವನ್‌ಧರ್ ಬಲ್ಲಾಳ್, ಸುಜಾತಾ ಕೋಟ್ಯಾನ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ಡಬಲ್ ಧಮಾಕಾ ಖುಷಿ ನೀಡಿದೆ. ಚಿಕ್ಕದಿರುವಾಗ ಅಜ್ಜನ ಜತೆ ಕುಳಿತು ಯಕ್ಷಗಾನ, ಭೂತಾರಾಧನೆಯ ಕಥೆಗಳನ್ನು ಕೇಳುತ್ತಿದ್ದ ಅನುಭವ ಈ ಚಿತ್ರ ಕಥೆಯನ್ನು ಮೊದಲು ಕೇಳುವಾಗ ಆಗಿತ್ತು. ನಟನೆಗಾಗಿ ಬೆಂಗಳೂರಿಗೆ ತೆರಳಿದ್ದ ನಾನು ಅನಿರೀಕ್ಷಿತವಾಗಿ ಮದಿಪು ಚಿತ್ರದ ನಿರ್ಮಾಪಕನಾಗುವಂತೆ ಮಾಡಿತು. ಚೇತನ್ ಅವರ ಚಿತ್ರಕಥೆ ನನ್ನನ್ನು ನಿರ್ಮಾಪಕನಾಗಲು ಪ್ರೇರೇಪಿಸಿತು. ತುಳು ಚಿತ್ರರಂಗದಲ್ಲಿ ಈ ಚಿತ್ರ ಹೊಸತನಕ್ಕೆ ಎಡೆಮಾಡಿಕೊಡಲಿದೆ ಎಂಬ ನಿರೀಕ್ಷೆ ಇತ್ತಾದರೂ ರಾಷ್ಟ್ರ ಪ್ರಶಸ್ತಿಯ ಬಗ್ಗೆ ಆಲೋಚನೆ ಇರಲಿಲ್ಲ.

-ಸಂದೀಪ್ ಕುಮಾರ್ ನಂದಳಿಕೆ, ಚಿತ್ರ ನಿರ್ಮಾಪಕ

ತುಳುನಾಡಿನ ಸಂಸ್ಕೃತಿ, ನಂಬಿಕೆ, ದೈವಾರಾಧನೆಯ ಮಹತ್ವವನ್ನು ಮಾನವೀಯ ಸಂಬಂಧಗಳ ಎಳೆಗಳೊಂದಿಗೆ ಬೆಸೆಯುವ ಪ್ರಯತ್ನದ ಜತೆಗೆ ತುಳುನಾಡಿನ ಸೌಹಾರ್ದಕ್ಕೆೆ ಉತ್ತರ, ಸಾಕ್ಷಿಯೇ ‘ಮದಿಪು’.

ಶೀರ್ಷಿಕೆಯಲ್ಲೇ ವ್ಯಕ್ತವಾಗುವಂತೆ ‘ಮದಿಪು’ ನಂಬಿಕೆದ ಪುರುಸದ (ನಂಬಿಕೆಯ ಪ್ರಸಾದ.) ತುಳು ಚಿತ್ರವೊಂದು ಸದ್ದಿಲ್ಲದೆಯೇ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ತುಳು ನಾಡಿನ ಗರಿಮೆಯನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿದೆ. ಕರಾವಳಿಯ ಕಲಾರಾಧನೆಯನ್ನೇ ಆಧಾರವಾಗಿರಿಸಿ ನಿರ್ಮಿಸಿದ ತುಳುವಿನ 78ನೆ ಸಿನೆಮಾ ‘ಮದಿಪು’-ನಂಬೊಲಿಗೆದ ಪುರುಸದ (ನಂಬಿಕೆಯ ಪ್ರಸಾದ) ಎಂಬ ಟ್ಯಾಗ್‌ಲೈನ್‌ನ ಚಿತ್ರ 64ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಚಿತ್ರದ ಜತೆಗೆ ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿಯನ್ನು ಪಡೆಯುವ ಮೂಲಕ ಡಬ್ಬಲ್ ಧಮಾಕಾದೊಂದಿಗೆ ಸದ್ಯ ಸುದ್ದಿಯಲ್ಲಿದೆ.

ತುಳುನಾಡಿನ ಚಿತ್ರವೊಂದು ರಾಷ್ಟ್ರ ಮನ್ನಣೆ ಪಡೆಯುತ್ತಿರುವುದು ಇದು ಐದನೆ ಬಾರಿ. 1993ರಲ್ಲಿ ಬಂಗಾರ್ ಪಟ್ಲೇರ್ ತುಳು ಸಿನೆಮಾ ರಾಷ್ಟ್ರ ಪ್ರಶಸ್ತಿ ಪಡೆದರೆ, 2006ರಲ್ಲಿ ಕೋಟಿ ಚೆನ್ನಯ, 2008ರಲ್ಲಿ ಗಗ್ಗರ ಚಲನಚಿತ್ರಗಳು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದವು. ಬಳಿಕ 2010ರಲ್ಲಿ ‘ಬ್ಯಾರಿ’ ಚಲನಚಿತ್ರ ಹಾಗೂ ಇದೀಗ 2017ರಲ್ಲಿ ಮದಿಪು ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿಯ ಮನ್ನಣೆ ದೊರಕಿದೆ. ರಾಜ್ಯ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿರುವ ಮದಿಪು ಚಲನಚಿತ್ರವು, ತುಳುನಾಡಿನ ಕೋಮು ಸಾಮರಸ್ಯವನ್ನು ರಾಷ್ಟ್ರಕ್ಕೆ ಬಿತ್ತರಿಸಿದೆ.

ಚಿತ್ರದ ಯಶಸ್ಸಿನ ಕುರಿತಂತೆ ಮದಿಪು ಚಿತ್ರದ ನಿರ್ಮಾಪಕ ಸಂದೀಪ್ ಕುಮಾರ್ ನಂದಳಿಕೆ ಹಾಗೂ ಚೇತನ್ ಮುಂಡಾಡಿ ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿದಾಗ ವ್ಯಕ್ತವಾದ ಅಭಿಮಾನದ ನುಡಿಗಳಿವು.

ತುಳುನಾಡಿನಲ್ಲಿ ಭೂತಾರಾಧನೆ ನಂಬಿಕೆಯ ಎಳೆಯೊಂದಿಗೆ ಭೂತ ಕಟ್ಟುವ ಸಮುದಾಯದ ವ್ಯಕ್ತಿಯೊಬ್ಬನ ತಳಮಳವನ್ನು ಪ್ರೇಕ್ಷಕರ ಮುಂದಿ ಡುವ ಪ್ರಯತ್ನವನ್ನು ಮದಿಪು ಮಾಡಿದೆ. ಭೂತ ಕಟ್ಟುವುದೇ ತನ್ನ ಜೀವನ ವಿಧಾನ ಹಾಗೂ ಧರ್ಮವನ್ನಾಗಿಸಿದ ಕುರುಬಿಲ ಎಂಬ ದೈವಾರಾಧಕ ಇದ್ದಕ್ಕಿದ್ದಂತೆ ತನ್ನ ನಂಬಿಕೆಯಿಂದ ವಿಮುಖನಾಗಿ ಆತನ ಮಗ ನೀಲಯ್ಯ ಭೂತಾರಾಧನೆಗೆ ಮುಂದಾಗಬೇಕಾದ ಪರಿಸ್ಥಿತಿ, ಗುತ್ತಿನಮನೆಯ ಸಿರಿವಂತಿಕೆ ಹಾಗೂ ಫಾತಿಮಾ ಎಂಬಾಕೆಯು ತನ್ನ ಮಗನಿಗಾಗಿ ಪರಿತಪಿಸುವ ವಿಭಿನ್ನ ಮಗ್ಗಲುಗಳ ಮೂಲಕ ತುಳುನಾಡಿನ ವಿಶಾಲವಾದ ಸೌಹಾರ್ದ ಪರಂಪರೆಯನ್ನು ತೆರೆದಿಡುವ ಪ್ರಯತ್ನವೇ ಮದಿಪು ಎನ್ನುತ್ತಾರೆ ಚಿತ್ರ ನಿರ್ದೇಶಕ ಚೇತನ್ ಮುಂಡಾಡಿ.

ಕಥೆಗೆ ಏನು ಪ್ರೇರಣೆ?

ಚೇತನ್: ಎರಡು ವರ್ಷಗಳ ಹಿಂದಿನ ವಿಚಾರವಿದು. ಮೂಡುಬಿದಿರೆಯಲ್ಲಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಸಂದರ್ಭ ಅಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಯಕ್ಷಗಾನದಲ್ಲಿ ಭಾಗವತಿಕೆ ಮಾಡುವುದನ್ನು ಕಂಡು ಅಚ್ಚರಿ ಪಟ್ಟಿದ್ದೆ. ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಯಕ್ಷಗಾನದ ಮೂಲಕ, ಜೇಸುದಾಸ್‌ರವರಿಗೆ ಗಾಯನದ ಮೂಲಕ ಸರಸ್ವತಿ ಒಲಿದಿರುವ ವಿಚಾರಗಳು ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಈ ವಿಚಾರವೇ ನಾನು ನನ್ನ ಗುರು ವಿನು ಬಳಂಜ, ಚೇತನಾ ತೀರ್ಥಹಳ್ಳಿ, ದಿಲ್‌ವಾರ ರಾಮದುರ್ಗ, ನಿತಿನ್ ರೈ ಕುಕ್ಕುವಳ್ಳಿ ಅವರಲ್ಲಿ ವಿಭಿನ್ನ ಆಯಾಮಗಳ ಕಥೆಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದೆ. ಅವರೆಲ್ಲರಿಂದಲೂ ದೊರಕಿದ 14 ವಿಭಿನ್ನ ಆಯಾಮಗಳ ಕಥೆಯನ್ನು ಕ್ರೋಡೀಕರಿಸಿ ಒಂದರ ಎಳೆ ಮಾಡಿಕೊಂಡು ಈ ಬಗ್ಗೆ ಅಧ್ಯಯನಕ್ಕೆ ಮುಂದಾದೆ. ಯಾವುದೇ ಕಾರಣಕ್ಕೂ ನನ್ನ ಕಥೆ ಯಾವುದೇ ಧರ್ಮ, ಸಮುದಾಯ, ಜನಾಂಗಕ್ಕೆ ಯಾವುದೇ ರೀತಿಯಲ್ಲಿ ನೋವು, ಅಸಮಾಧಾನ ತಾರದಂತೆ ಸಾಕಷ್ಟು ಅಧ್ಯಯನ ನಡೆಸಿಯೇ ಈ ಚಿತ್ರಕಥೆಯನ್ನು ರೂಪಿಸಿದ್ದೇನೆ. 

ಮದಿಪು ಚಿತ್ರದ ವಿಭಿನ್ನತೆ?

 ►‘ಮದಿಪು’ ಕೇವಲ ಮನುಷ್ಯ ಸಂಬಂಧಗಳ ಕಥೆಯಲ್ಲ. ಧರ್ಮ, ಜಾತಿ, ನಂಬಿಕೆ ಮತ್ತು ಕಲೆಯ ಅಪೂರ್ವ ಸಂಗಮದಂತೆ ಕಾಣುವ ಭೂತಾರಾಧನೆಯ ಸೂಕ್ಷ್ಮತೆಯನ್ನು ತೆರೆದಿಡುವ ಚಿತ್ರ. ತಾಯಿಯೊಬ್ಬಳ ಕಳೆದುಹೋದ ಮಗನ ಹುಡುಕಾಟ, ವಿಚಿತ್ರ ಸನ್ನಿವೇಶನದಲ್ಲಿ ತನ್ನ ಮಗನಿಗಾಗಿ ದೈವಕ್ಕೆ ಸಲ್ಲಿಸುವ ಹರಕೆ, ಯುವಕನೊಬ್ಬ ವಿಚಿತ್ರ ಸನ್ನಿವೇಶದಲ್ಲಿ ದೈವಾರಾಧನೆಗೆ ಮುಂದಾಗುವ ಅನಿವಾರ್ಯತೆ. ಕೊನೆಗೂ ತಾಯಿಗೆ ತನ್ನ ಕಳೆದುಹೋದ ಮಗ ಸಿಗುತ್ತಾನೆಯೇ ಎಂಬುದು ಈ ಚಿತ್ರದ ಕ್ಲೈಮಾಕ್ಸ್ಸ್.

‘ಮದಿಪು’ ಚಿತ್ರದ ಮೂಲಕ ನೀಡಿದ ಸಂದೇಶವೇನು?

►ಚೇತನ್ : ನಾನೊಬ್ಬ ಕಲಾ ನಿರ್ದೇಶಕನಾಗಿದ್ದವ. ಮದಿಪು ಚಿತ್ರ ಆಕಸ್ಮಿಕವಾಗಿ ನನಗೆ ಚಿತ್ರ ನಿರ್ದೇಶಕನಾಗುವ ಅವಕಾಶ ನೀಡಿತು. ಈ ಚಿತ್ರದ ಮೂಲಕ ತುಳುನಾಡಿನ ಸಂಸ್ಕೃತಿ ಹಾಗೂ ಸೌಹಾರ್ದದ ಕೊಂಡಿಯನ್ನು ಜನತೆಯ ಮುಂದಿಡುವ ಸಣ್ಣ ಪ್ರಯತ್ನ. ಒಬ್ಬ ತಾಯಿಗೆ ತನ್ನ ಮಗು ಎಂದಿಗೂ ಸರ್ವಸ್ವ. ನಂಬಿಕೆ ಎನ್ನುವುದು ಜಾತಿ, ಧರ್ಮಗಳನ್ನೂ ಮೀರಿದ್ದು ಎನ್ನುವ ಸೌಹಾರ್ದದ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗಿದೆ. ಧರ್ಮಗಳ ನಡುವಿನ ಅನುಮಾನ, ಸಂಘರ್ಷ- ತಾಕಲಾಟಗಳಿಗೂ ಸ್ಪಷ್ಟ ಉತ್ತರವೇ ‘ಮದಿಪು’.

ಚಿತ್ರಕ್ಕೆ ರಾಷ್ಟ್ರ, ರಾಜ್ಯ ಪ್ರಶಸ್ತಿ ಗರಿಮೆಯ ಬಗ್ಗೆ ಏನನ್ನುತ್ತೀರಿ?

►ಇದು ತುಳುನಾಡಿಗೆ, ತುಳು ಚಿತ್ರ ರಂಗಕ್ಕೆ ಸಂದ ಗೌರವ. ಈ ಚಿತ್ರದ ಯಶಸ್ಸಿಗೆ ಚಿತ್ರದ ನಿರ್ಮಾಪಕರೂ ಪ್ರಮುಖ ಕಾರಣರು. ಇದೊಂದು ಕಲಾತ್ಮಕ ಚಿತ್ರ. ಯಾವುದೇ ನಿರೀಕ್ಷೆ ಇಲ್ಲದೆ, ನಿರ್ಮಾಪಕರು ಕೇವಲ ನಂಬಿಕೆಯ ಆಧಾರದಲ್ಲಿ ಈ ಚಿತ್ರಕ್ಕೆ ಮುಂದಾದರು. ಹೊಸ ನಿರ್ದೇಶಕನೊಬ್ಬನ ಕಲಾತ್ಮಕತೆಯ ಮೇಲಿನ ನಂಬಿಕೆಯೂ ಚಿತ್ರದ ಈ ಮನ್ನಣೆಗೆ ಕಾರಣ. ತುಳುನಾಡಿನ ಪ್ರಮುಖ ಅಂಶವಾಗಿರುವ ದೈವಾರಾಧನೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಚಿತ್ರವನ್ನು ಸಾದರಪಡಿಸುವಲ್ಲಿ ದೈವಾರಾಧನೆಯ ತಜ್ಞ ದಯಾನಂದ ಕತ್ತಲ್ಸಾರ್ ಸಹಕಾರವನ್ನೂ ಈ ಸಂದರ್ಭ ನೆನಪಿಸಲೇಬೇಕು.

ಪ್ರಶಸ್ತಿ ಪಡೆದ ಚಿತ್ರವಾದರೂ ಪ್ರೇಕ್ಷರಿಗಿನ್ನೂ ತಲುಪಿಲ್ಲ?

►ಚಿತ್ರವನ್ನು ಪೂರ್ವ ನಿರ್ಧಾರದೊಂದಿಗೆ ಕಳೆದ ಮಾರ್ಚ್ 10ರಂದು ನಗರದ ಸುಚಿತ್ರ ಟಾಕೀಸ್ ಸೇರಿದಂತೆ ಕರಾವಳಿಯ 9 ಥಿಯೇಟರ್‌ಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಒಂದೆರಡು ವಾರ ಮಾತ್ರ ಪ್ರದರ್ಶನಗೊಂಡಿತ್ತು. ಮತ್ತೆ ರಾಜ್ಯಾದ್ಯಂತ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಆಲೋಚನೆ ನಡೆಯುತ್ತಿದೆ. 

ವಿದೇಶಗಳಲ್ಲಿ ಪ್ರದರ್ಶಿಸುವ ಆಲೋಚನೆ ಇದೆಯೇ?

ಖಂಡಿತಾ ಇದೆ. ಮುಂಬೈ, ದುಬೈ ಹಾಗೂ ಇತರ ಕೆಲ ರಾಷ್ಟ್ರಗಳಲ್ಲಿಯೂ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ಪರೀಕ್ಷೆಗಳು ನಡೆಯುತ್ತಿರುವುದರಿಂದ ಶೀಘ್ರವೇ ‘ಮದಿಪು’ ದೇಶ ವಿದೇಶಗಳಲ್ಲಿ ತೆರೆ ಕಾಣಲಿದೆ.

ಪ್ರಶಸ್ತಿಯ ನಿರೀಕ್ಷೆ ಇತ್ತೇ?

►ನಿರ್ದೇಶನಕೊಬ್ಬನಿಗೆ ತನ್ನ ಚಿತ್ರ ಪ್ರಶಸ್ತಿ ಗಳಿಸಬೇಕೆಂಬ ಆಸೆ, ಆಶಯ ಇದ್ದೇ ಇರುತ್ತದೆ. ಹಾಗೆಯೇ ನನಗೂ ಇತ್ತು. ಆದರೆ ರಾಷ್ಟ್ರ ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಆದರೆ ಚಿತ್ರಕ್ಕೆ ಎರಡೆರಡು ಪ್ರಶಸ್ತಿಗಳು ದೊರಕಿರುವುದು ತುಳುನಾಡಿಗೆ ಸಂದ ಗೌರವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News