ಸಮಾನ ಕೆಲಸಕ್ಕೆ ಸಮಾನ ವೇತನ ಮನವಿ ಪರಿಶೀಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಎ.14: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಕೇಂದ್ರೀಯ ಪೊಲೀಸ್ ಸಿಬ್ಬಂದಿಗಳ ಮನವಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಈ ಪೊಲೀಸ್ ಸಿಬ್ಬಂದಿಗಳು ಗ್ರೂಫ್ ‘ಎ’ ಅಧಿಕಾರಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದರೆ ಅವರಿಗೆ ಸಮಾನ ರೀತಿಯ ಆರ್ಥಿಕ ಅನುಕೂಲ ನೀಡುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಲಿ. ಆರ್ಥಿಕ ಅನುಕೂಲ ಒದಗಿಸಿದರೆ ಅವರ ಅತೃಪ್ತಿ ಶಮನಗೊಳ್ಳುವುದಾದರೆ ಸರಕಾರ ಅದನ್ನು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್‌ನ ಪೀಠವೊಂದರ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಮೋಹನ್ ಎಂ.ಶಾಂತನಗೌಡರ್ ಹೇಳಿದರು.
ಕೇಂದ್ರ ಸರಕಾರ ಮತ್ತು ಭಾರತೀಯ ಪೊಲೀಸ್ ಸೇವೆಗಳ ಕೇಂದ್ರೀಯ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನ ಪೀಠವು ಈ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 9ಕ್ಕೆ ಮುಂದೂಡಿದ ನ್ಯಾಯಾಲಯ, ವಿವಿಧ ಪೊಲೀಸ್ ಸಂಘಟನೆಗಳು ಕಾರ್ಯದ ಬಗ್ಗೆ ಮತ್ತು ಇವರಿಗೆ ಕೆಲಸವನ್ನು ಹಂಚಿಕೊಡುವ ವಿಧಾನದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.
ಕೇಂದ್ರೀಯ ಪೊಲೀಸ್ ಸಂಘಟನೆಗಳ ಅಧಿಕಾರಿಗಳ ಸೇವೆಯನ್ನು ಸಂಘಟಿತ ಗ್ರೂಫ್ ‘ಎ’ ಸೇವೆ ಎಂದು ಪರಿಗಣಿಸಿದರೆ, ಮುಂದೆ ಭಾರತೀಯ ಪೊಲೀಸ್ ಸೇವೆಯಿಂದ ಯಾವುದೇ ಪ್ರತಿ ನಿಯೋಜನೆ(ಡೆಪ್ಯುಟೇಷನ್) ಸಾಧ್ಯವಾಗದು ಎಂದು ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಹೇಳಿದರು.
ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ, ಆರ್‌ಪಿಎಫ್ ಮತ್ತು ಎಸ್‌ಎಸ್‌ಬಿ ಸಿಬ್ಬಂದಿಗಳು , ಏಕ ರೀತಿಯ ಕೆಲಸಕ್ಕೆ ಏಕರೀತಿಯ ವೇತನ ಸೌಲಭ್ಯ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.