ಶ್ರೀನಗರ ಉಪ ಚುನಾವಣೆ: ಫಾರೂಕ್ ಅಬ್ದುಲ್ಲಾಗೆ ಮುನ್ನಡೆ
ಶ್ರೀನಗರ, ಎ.15: ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸಹಿತ 9 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಪಿಡಿಪಿಯ ಹಮೀದ್ ಕರ್ರಾ ವಿರುದ್ಧ ಸೋತಿದ್ದ 79ರ ಪ್ರಾಯದ ಅಬ್ದುಲ್ಲಾ ಹಾಗೂ ಆಡಳಿತರೂಢ ಪಿಡಿಪಿಯ ಅಭ್ಯರ್ಥಿ ನಝೀರ್ ಅಹ್ಮದ್ ಖಾನ್ ನಡುವೆ ನೇರ ಸ್ಪರ್ಧೆ ಏರ್ಪಟಿದೆ. ಆರಂಭಿಕ ಸುತ್ತಿನಲ್ಲಿ ಫಾರೂಕ್ ಅಬ್ದುಲ್ಲಾ ಅವರು ಪ್ರತಿಸ್ಪರ್ಧಿ ಪಿಡಿಪಿಯ ನಝೀರ್ ಖಾನ್‌ರಿಂದ 986 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಹಮೀದ್ ಕರ್ರಾ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಶ್ರೀನಗರ ಲೋಕಸಭಾ ಸ್ಥಾನ ತೆರವುಗೊಂಡಿತ್ತು. ಕಾಂಗ್ರೆಸ್ ಉಪ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಮತ ಎಣಿಕೆಯು ಶೇರ್-ಇ-ಕಾಶ್ಮೀರದ ಇಂಟರ್‌ನ್ಯಾಶನಲ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿದೆ.
ಶ್ರೀನಗರ ಲೋಕಸಭಾ ಉಪ ಚುನಾವಣೆಯು ಎ.9 ರಂದು ನಡೆದಿತ್ತು. ಈ ಕ್ಷೇತ್ರದಲ್ಲಿ ಅತ್ಯಂತ ಕನಿಷ್ಠ 7.13 ಶೇ. ಮತದಾನವಾಗಿತ್ತು. ಚುನಾವಣಾ ಆಯೋಗ ಶುಕ್ರವಾರದಂದು ಮರು ಚುನಾವಣೆ ನಡೆಸಿದ್ದು, ಮರು ಮತದಾನದಲ್ಲಿ ಕೇವಲ 2 ಶೇ.ದಷ್ಟು ಮತದಾನವಾಗಿತ್ತು.
ಚುನಾವಣೆಯ ದಿನದಂದು ನಡೆದ ಹಿಂಸಾಚಾರ ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದು, ಕಲ್ಲು ತೂರಾಟದಲ್ಲಿ ಭದ್ರತಾ ಸಿಬ್ಬಂದಿಗಳು ಸಹಿತ ಹಲವು ಮಂದಿ ಗಾಯಗೊಂಡಿದ್ದರು.