×
Ad

ಜಾಧವ್ ರಕ್ಷಣೆಗೆ ತೊಗಾಡಿಯಾ ಸಲಹೆ ಏನು ಗೊತ್ತೆ?

Update: 2017-04-15 12:59 IST

ಜಮ್ಶೆಡ್ ಪುರ್, ಎ.15: ಮರಣದಂಡನೆ ಶಿಕ್ಷೆಗೊಳಗಾಗಿರುವ ಭಾರತದ ಮಾಜಿ ನೌಕಾದಳ ಅಧಿಕಾರಿ ಅವರ ಬಿಡುಗಡೆಗಾಗಿ ಭಾರತವು ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಬೇಕೆಂದು ವಿಶ್ವ ಹಿಂದು ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಅಫ್ಘಾನಿಸ್ಥಾನದಲ್ಲಿನ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದಂತೆ ನಡೆದ ಬಾಂಬ್ ದಾಳಿಗಳನ್ನು ಸ್ವಾಗತಿಸಿದರು. ಭಾರತ ಕೂಡ ಇದರಿಂದ ಕಲಿಯಬೇಕು ಎಂದು ಹೇಳಿದರಲ್ಲದೆ, ಇದೇ ಧೋರಣೆಯನ್ನನುಸರಿಸಿ ಗೂಢಚರ್ಯೆ ಆರೋಪ ಎದುರಿಸುತ್ತಿರುವ ಜಾಧವ್ ಅವರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಬೇಕೆಂದು ಹೇಳಿದ್ದಾರೆ.

‘‘ತಮಗೆ ಅಮೆರಿಕ ಎಲ್ಲದಕ್ಕಿಂತ ಮೊದಲು ಎಂಬುದನ್ನು ವಾಷಿಂಗ್ಟನ್ನಿನಿಂದ 10,000 ಕಿ.ಮೀ. ದೂರದಲ್ಲಿರುವ ಅಫ್ಘಾನಿಸ್ಥಾನದ ಐಎಸ್ ಅಡಗುತಾಣಗಳ ಮೇಲಿನ ದಾಳಿಯಿಂದ ಟ್ರಂಪ್ ತೋರಿಸಿಕೊಟ್ಟಿದ್ದಾರೆ. ಇದೇ ದೃಢತೆಯಿಂದ ಇಂಡಿಯಾ ಫಸ್ಟ್ ಎಂದು ತಿಳಿದು ಹೊಸದಿಲ್ಲಿಯಿಂದ ಕೇವಲ 800 ಕಿ.ಮೀ. ದೂರದಲ್ಲಿರುವ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ ಭಾರತೀಯ ಮಾಜಿ ಯೋಧನನ್ನು ಬಚಾವ್ ಮಾಡಬೇಕು’’ ಎಂದಿದ್ದಾರೆ ತೊಗಾಡಿಯಾ.

ಕಾಶ್ಮೀರದಲ್ಲಿ ಸುರಕ್ಷಾ ಪಡೆಗಳೊಂದಿಗೆ ಯುದ್ಧದಲ್ಲಿರುವ ಉಗ್ರಜನ್ನೂ ಬಾಂಬ್ ದಾಳಿ ನಡೆಸುವ ಮೂಲಕ ಮಟ್ಟ ಹಾಕಬೇಕೆಂದು ತೊಗಾಡಿಯಾ ಹೇಳಿದ್ದಾರೆ. ‘‘ಯಾವುದೇ ಮುಲಾಜಿಲ್ಲದೆ ಇಂತಹ ಕ್ರಮ ಕೈಗೊಳ್ಳದೇ ಹೋದಲ್ಲಿ ಇಂತಹ ಶಕ್ತಿಗಳು ಬೇರೆ ರಾಜ್ಯಗಳಿಗೆ ಪಸರಿಸಿ ದೇಶವನ್ನು ಹೋಳಾಗಿಸಬಹುದು’’ ಎಂದು ಅವರು ಹೇಳಿದ್ದಾರೆ.

ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಲು ತೊಗಾಡಿಯಾ ಮೂರು ದಿನಗಳ ಜಾರ್ಖಂಡ್ ಭೇಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News