ಗಿನ್ನೆಸ್ ದಾಖಲೆ ಬರೆದ ದುಬೈ ಗುರುದ್ವಾರದ ‘ಬ್ರೇಕ್ ಫಾಸ್ಟ್ ಫಾರ್ ಡೈವರ್ಸಿಟಿ’
ದುಬೈ, ಎ.15: ದುಬೈಯಲ್ಲಿರುವ ಗುರುದ್ವಾರ ಗುರು ನಾನಕ್ ದರ್ಬಾರ್ ಗುರುವಾರದಂದು 101 ರಾಷ್ಟ್ರಗಳ 600 ಮಂದಿಗೆ ಉಚಿತ ಉಪಾಹಾರ ನೀಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದೆ. ಜೆಬೆಲ್ ಆಲಿ ಎಂಬಲ್ಲಿ ನಡೆದ ಈ ಒಂದು ಗಂಟೆಯ ‘ಬ್ರೇಕ್ ಫಾಸ್ಟ್ ಫಾರ್ ಡೈವರ್ಸಿಟಿ’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸರಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಮಟ್ಟದ ಅಧಿಕಾರಿಗಳೂ ಭಾಗವಹಿಸಿದ್ದರು. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಭಾರತದ ರಾಯಭಾರಿಯಾಗಿರುವ ನವದೀಪ್ ಸಿಂಗ್ ಸೂರಿ ಮುಖ್ಯ ಅತಿಥಿಯಾಗಿದ್ದರು.
ನಗರದ ವಿವಿಧೆಡೆಗಳಿಂದ ಬಂದ ಜನರು ಜೆಬೆಲ್ ಆಲಿ ಗಾರ್ಡನ್ನಿನಲ್ಲಿ ಸ್ಥಾಪಿಸಲ್ಪಟ್ಟಿದ್ದ ಟೆಂಟ್ ಒಂದರಲ್ಲಿ ಸೇರಿ ಈ ಮ್ಯಾರಥಾನ್ ಉಪಾಹಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳೂ ಉಪಸ್ಥಿತರಿದ್ದು, ಈ ಹಿಂದೆ ನುಟೆಲ್ಲಾ ಎಂಬ ಸಂಸ್ಥೇ ಇಟೆಲಿಯಲ್ಲಿ ನಡೆದ ಮಿಲಾನ್ ಎಕ್ಸ್ ಪೋ 2015 ಇಲ್ಲಿ ಆಯೋಜಿಸಿದ್ದ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ನಲ್ಲಿ 55 ರಾಷ್ಟ್ರೀಯರು ಭಾಗವಹಿಸಿ ದಾಖಲೆ ನಿರ್ಮಿಸಿದ್ದರು.ಇದೀಗ ದುಬೈ ಗುರುದ್ವಾರ ಈ ದಾಖಲೆಯನ್ನು ಮುರಿದಿದೆ ಎಂದು ದೃಢ ಪಡಿಸಿದ್ದಾರೆ.
ತನ್ನ ಸಮುದಾಯ ಅಡುಗೆ ಮನೆಯ ಮೂಲಕ ಎಲ್ಲಾ ಸಂದರ್ಶಕರಿಗೂ ಉಚಿತ ಊಟ ನೀಡುವ ಈ ಗುರುದ್ವಾರ ಯುಎಇಯಲ್ಲಿರುವ ಸುಮಾರು 50,000ಕ್ಕೂ ಮಿಗಿಲಾದ ಸಿಕ್ಖರಿಗೆ ಪತ್ರ ಸ್ಥಳವಾಗಿದೆ.