ಕರ್ನಾಟಕದ 11 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂಬೈಯಲ್ಲಿ ಸಮುದ್ರಪಾಲು

Update: 2017-04-15 14:30 GMT


ಮೃತರಲ್ಲಿ ಇಬ್ಬರು ವಿದ್ಯಾರ್ಥಿನಿಯರು

ಇನ್ನಿಬ್ಬರ ಸ್ಥಿತಿ ಗಂಭೀರ

ಪಿಕ್‌ನಿಕ್‌ಗೆ ತೆರಳಿದ್ದ 40 ವಿದ್ಯಾರ್ಥಿಗಳ ತಂಡ

ಪುಣೆ,ಎ.15: ಇಬ್ಬರು ಯುವತಿಯರು ಸೇರಿದಂತೆ ಬೆಳಗಾವಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಎಂಟು ಮಂದಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ಬೀಚ್‌ನಲ್ಲಿ ಸಮುದ್ರಪಾಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಬೆಳಗಾವಿಯ ಹೊರವಲಯದಲ್ಲಿರುವ ಮರಾಠಾ ಮಂಡಳಿ ಇಂಜಿನಿಯರಿಂಗ್ ಕಾಲೇಜ್‌ನ 40 ಮಂದಿ ವಿದ್ಯಾರ್ಥಿಗಳ ತಂಡವೊಂದು ಬಸ್ಸೊಂದರಲ್ಲಿ ನಿನ್ನೆ ಮಹಾರಾಷ್ಟ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ವಿದ್ಯಾರ್ಥಿಗಳ ತಂಡವು ಇಂದು ಬೆಳಗ್ಗೆ ಮಾಲ್ವಾನ್‌ನ ರಮಣೀಯ ವಾರಿ ಬೀಚ್‌ಗೆ ಆಗಮಿಸಿತ್ತು.

ಬಲವಾದ ಅಲೆಗಳು ಎದ್ದಿರುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿದ ವಿದ್ಯಾರ್ಥಿಗಳು ಈಜಲು ಸಮುದ್ರಕ್ಕಿಳಿದಿದ್ದರು, ಕೆಲವೇ ಕ್ಷಣಗಳಲ್ಲಿ ಅವರನ್ನು ಬಲವಾದ ಅಲೆಗಳು ಕೊಚ್ಚಿಕೊಂಡು ಹೋದವೆಂದು ಪೊಲೀಸರು ತಿಳಿಸಿದ್ದಾರೆ.ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದ ಇತರ ಮೂವರು ವಿದ್ಯಾರ್ಥಿಗಳನ್ನು ಸ್ಥಳೀಯ ಬೆಸ್ತರು ರಕ್ಷಿಸಿದ್ದು, ಅವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಮಾಲ್ವಾನ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸಮುದ್ರಪಾಲಾದವರಲ್ಲಿ ಕೆಲವರನ್ನು ಮೀನುಗಾರರು ರಕ್ಷಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ನೀರು ಪಾಲಾದ ಎಲ್ಲಾ ಎಂಟು ಮಂದಿ ವಿದ್ಯಾರ್ಥಿಗಳ ಮೃತದೇಹ ಆನಂತರ ಪತ್ತೆಯಾಗಿವೆ. ದುರಂತದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News