×
Ad

ಕಿವುಡ-ಮೂಕ ಬಾಲಕನನ್ನು ಕುಟುಂಬದೊಂದಿಗೆ ಮರಳಿ ಸೇರಿಸಿದ ಆಧಾರ್!

Update: 2017-04-15 16:07 IST
ಸಂಜಯ್ ಮತ್ತೆ ಸಿಕ್ಕಿದ್ದಕ್ಕೆ ಆನಂದಾಶ್ರು ಸುರಿಸುತ್ತಿರುವ ಸಂಗಮ್ಮ

ವಡೋದರಾ,ಎ.15: ಆಧಾರ್ ವ್ಯವಸ್ಥೆ ಇಲ್ಲದಿದ್ದರೆ ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಸಂಗಮ್ಮಾ ಗಂಟೆ ತನ್ನ ಕಿವುಡ-ಮೂಕ ಅನಾಥ ಸೋದರ ಸಂಜಯ್‌ನನ್ನು ಮರಳಿ ಪಡೆಯಲೆಂದೂ ಸಾಧ್ಯವಾಗುತ್ತಿರಲಿಲ್ಲ.

ಲಾತೂರು ಜಿಲ್ಲೆಯ ಹೆಂಚಾಳ ಗ್ರಾಮದ ನಿವಾಸಿ ಸಂಜಯ್ 2014ರಲ್ಲಿ ತನ್ನ ಹಿರಿಯ ಸೋದರನ ಜೊತೆಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋದವನು ಇತ್ತೀಚಿಗೆ ನರ್ಮದಾ ಜಿಲ್ಲೆಯ ರಾಜ್‌ಪಿಪ್ಲಾ ಪಟ್ಟಣದಲ್ಲಿ ಮರಳಿ ತನ್ನ ಕುಟುಂಬದ ಮಡಿಲಿಗೆ ಸೇರಿದ್ದಾನೆ. ಅಧಿಕಾರಿಗಳು ಆತನ ವಿವರಗಳನ್ನು ಸರಕಾರಿ ವೆಬ್‌ಸೈಟ್‌ನಲ್ಲಿ ಪತ್ತೆ ಹಚ್ಚುವ ಮೂಲಕ ಈ ಪುನರ್ಮಿಲನವನ್ನು ಸಾಧ್ಯವಾಗಿಸಿದ್ದಾರೆ.

ಸಂಜಯ್‌ನ ಹೆತ್ತವರು 2011ರಲ್ಲಿ ತೀರಿಕೊಂಡ ಬಳಿಕ ಸಂಗಮ್ಮನೇ ತನ್ನ ಕಿರಿಯ ಸೋದರನನ್ನು ಸಾಕುತ್ತಿದ್ದಳು.

ಕಳೆದ ವರ್ಷದ ಮಾ.22ರಂದು ಆಗ 11ರ ಹರೆಯದವನಾಗಿದ್ದ ಸಂಜಯ್ ವಡೋದರಾ ರೈಲ್ವೆ ನಿಲ್ದಾಣದಲ್ಲಿ ದಿಕ್ಕುದೆಸೆಯಿಲ್ಲದೆ ಅಲೆದಾಡುತ್ತಿದ್ದಾಗ ರೈಲ್ವೆ ಪೊಲೀಸರ ಕಣ್ಣಿಗೆ ಬಿದ್ದಿದ್ದ. ಸಂಜಯ್‌ಗೆ ಮಾತೂ ಬರುತ್ತಿರಲಿಲ್ಲ,ಕಿವಿಯೂ ಕೇಳಿಸುತ್ತಿರಲಿಲ್ಲ. ಹೀಗಾಗಿ ಆತನ ಕುಟುಂಬದ ಮಾಹಿತಿಗಳನ್ನು ಪಡೆಯುವ ಅವರ ಎಲ್ಲ ಪ್ರಯತ್ನಗಳು ವಿಫಲಗೊಂಡಿದ್ದವು. ರೈಲ್ವೆ ಪೊಲೀಸರು ಆತನನ್ನು ವಡೋದರಾದ ಡಾನ್ ಬಾಸ್ಕೋ ಸ್ನೇಹಾಲಯಕ್ಕೆ ಕಳುಹಿಸಿದ್ದರು.

15 ದಿನಗಳ ಬಳಿಕ ಸಂಜಯ್‌ನನ್ನು ರಾಜ್‌ಪಿಪ್ಲಾದಲ್ಲಿ ಬಾಲ ಸುರಕ್ಷಾ ಆಯೋಗವು ನಡೆಸುತ್ತಿರುವ ಕಿವುಡ-ಮೂಕ ಮಕ್ಕಳ ಸನಿವಾಸ ಶಾಲೆಗೆ ಸೇರಿಸಲಾಗಿತ್ತು.

ಸಂಜಯ್ ಕುರಿತು ಮಾಹಿತಿಗಳನ್ನು ಕಲೆ ಹಾಕಲು ನರ್ಮದಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳೂ ಪ್ರಯತ್ನಿಸಿದ್ದರು. ಆದರೆ ಅದು ವಿಫಲಗೊಂಡ ಬಳಿಕ ಆತನಿಗೆ ಆಕಾಶ್ ಎಂದು ನಾಮಕರಣ ಮಾಡಿದ ಅಧಿಕಾರಿಗಳು ಎರಡನೇ ತರಗತಿಗೆ ಸೇರಿಸಿದ್ದರು.

 ಶಾಲೆಯ ಎಲ್ಲ ಮಕ್ಕಳು ಆಧಾರ್ ಸಂಖ್ಯೆ ಹೊಂದುವುದು ಕಡ್ಡಾಯವಾಗಿದ್ದರಿಂದ 2017,ಜನವರಿಯಲ್ಲಿ ನೋಂದಣಿ ಶಿಬಿರವೊಂದನ್ನು ಏರ್ಪಡಿಸಲಾಗಿದ್ದು, ಎಲ್ಲ ವಿದಾರ್ಥಿಗಳ ಬೆರಳಚ್ಚು ಮತ್ತು ಅಕ್ಷಿಪಟಲದ ಸ್ಕಾನ್ ಮಾಡಲಾಗಿತ್ತು.

 ವಾರದ ಬಳಿಕ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ ಯಶಸ್ವಿಯಾಗಿದ್ದರೆ ಆಕಾಶ್‌ನ ನೋಂದಣಿ ಮಾತ್ರ ಆಗಿರಲಿಲ್ಲ. ಆಧಾರ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ವಿವರಗಳು ಎರಡು ಬಾರಿ ದಾಖಲಾಗಿರುವುದು ಬೆಳಕಿಗೆ ಬಂದಿತ್ತು. ಇನ್ನಷ್ಟು ಕೂಲಂಕಶ ಪರಿಶೀಲನೆಯ ಬಳಿಕ ಆಕಾಶ್‌ನ ನೋಂದಣಿ 2011ರಲ್ಲಿಯೇ ಆಗಿತ್ತು ಎನ್ನುವುದು ಗೊತ್ತಾಗಿತ್ತು ಮತ್ತು ವೆಬ್‌ಸೈಟ್ ಸಂಜಯ್ ನಾಗನಾಥ ಎಂಕೂರ್‌ನ ಫೋಟೊ ಮತ್ತು ವಿವರಗಳನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿತ್ತು.

ಅಧಿಕಾರಿಗಳು ಸಂಜಯ್‌ನ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ರಾಜ್‌ಪಿಪ್ಲಾಕ್ಕೆ ಧಾವಿಸಿದ ಸಂಗಮ್ಮ ತಮ್ಮನನ್ನು ಮನೆಗೆ ಕರೆದೊಯ್ದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News