ಪಂಜಾಬ್ ಸರ್ಕಾರಕ್ಕೆ ' ಖಾಲಿಸ್ತಾನ ಬೆಂಬಲಿಗ' , ಕೇಂದ್ರ ಸರ್ಕಾರಕ್ಕೆ ' ಯುದ್ಧ ಹೀರೊ'

Update: 2017-04-15 12:30 GMT

ಚಂಡೀಗಡ,ಎ.15: ಮಿತ್ರರಾಷ್ಟ್ರವೊಂದರ ಹಿರಿಯ ಸಚಿವರೋರ್ವರ ಭೇಟಿ ಕುರಿತಂತೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡದ ಸಂದರ್ಭವೊಂದು ಸೃಷ್ಟಿಯಾಗಿದ್ದು ತುಂಬ ಅಪರೂಪ. ಆದರೆ ಎ.19ರಿಂದ ಆರಂಭವಾಗಲಿರುವ ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಅವರ ನಾಲ್ಕು ದಿನಗಳ ಭಾರತ ಭೇಟಿ ಕುರಿತಂತೆ ಈಗ ಪಂಜಾಬ್‌ನಲ್ಲಿ ಇದೇ ಸ್ಥಿತಿ ಉದ್ಭವಗೊಂಡಿದೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಜ್ಜನ್ ಮತ್ತು ಕೆನಡಾ ಸರಕಾರದಲ್ಲಿಯ ಅವರ ಸಿಖ್ ಸಹೋದ್ಯೋಗಿಗಳನ್ನು ಖಾಲಿಸ್ತಾನ್ ಬೆಂಬಲಿಗರೆಂದು ಬಣ್ಣಿಸಿದ್ದರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಜ್ಜನ್‌ರನ್ನು ಯುದ್ಧ ಹೀರೊ ಎಂದು ಕರೆದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎ.5ರಂದು ಪಂಜಾಬ್ ಸರಕಾರಕ್ಕೆ ಕಳುಹಿಸಿರುವ ಟಿಪ್ಪಣಿಯಲ್ಲಿ ಸಜ್ಜನ್‌ರನ್ನು ಓರ್ವ ಯೋಧ ಮತ್ತು ಓರ್ವ ಪೊಲೀಸ್ ಅಧಿಕಾರಿಯಾಗಿ ಕೆನಡಾ ಮತ್ತು ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸಿರುವ ಆದರ್ಶ ವೃತ್ತಿಜೀವನ ಹೊಂದಿರುವ ವ್ಯಕ್ತಿ ಎಂದು ಹೇಳಿದೆ.

ಅಫಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಜ್ಜನ್ ಪಾತ್ರವನ್ನು ಉಲ್ಲೇಖಿಸಿರುವ ಟಿಪ್ಪಣಿಯು, ಅವರು ಕೆನಡಾ ಸಶಸ್ತ್ರ ಪಡೆಗಳ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮತ್ತು ಹಿರಿಯ ಯುದ್ಧ ಹೋರಾಟಗಾರರಾಗಿದ್ದಾರೆ. ಅವರನ್ನು ಬೊಸ್ನಿಯಾ-ಹರ್ಝೆಗೊವಿನಾದಲ್ಲಿ ನಿಯೋಜಿಸಲಾಗಿತ್ತು ಮತ್ತು ಅಫಘಾನಿಸ್ತಾನದ ಕಂದಹಾರ್‌ನಲ್ಲಿ ಮೂರು ಪ್ರತ್ಯೇಕ ಅವಧಿಗಳಿಗೆ ನಿಯೋಜನೆಗೊಂಡಿದ್ದರು ಎಂದು ಹೇಳಿದೆೆ.

ಸಜ್ಜನ್ ಅವರು ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನಿಗಳ ಪ್ರಭಾವವನ್ನು ತಗ್ಗಿಸಿದ್ದಕ್ಕೆ ಶ್ಲಾಘನೀಯ ಸೇವಾ ಪದಕ ಸೇರಿದಂತೆ ತನ್ನ ಸೇವಾವಧಿಯಲ್ಲಿ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿರುವ ಟಿಪ್ಪಣಿಯು,ವ್ಯಾಂಕೂವರ್ ಪೊಲೀಸ್‌ನಲ್ಲಿ ಅವರ ಸೇವೆಯ ವಿವರಗಳನ್ನು ಉಲ್ಲೇಖಿಸಿದೆ.

ಹಾಲಿ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಅವರು 2014ರಲ್ಲಿ ಉತ್ತರ ಕ್ಯಾರೊಲಿನಾದ ರಾಜ್ಯಪಾಲರಾಗಿ ಪಂಜಾಬ್‌ಗೆ ಭೇಟಿ ನೀಡಿದ್ದಾಗ ಅವರನ್ನು ರಾಜ್ಯದ ಅತಿಥಿ ಎಂದು ಘೋಷಿಸಲಾಗಿತ್ತು. ಆದರೆ ಸಜ್ಜನ್ ಅವರು ಈ ಗೌರವದಿಂದ ವಂಚಿತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News