ನಾಪತ್ತೆಯಾದ ಮುಸ್ತಫಾ!

Update: 2017-04-15 18:38 GMT

ಪುತ್ತೂರು ತಲುಪುವಾಗ ಶ್ಯಾಮಭಟ್ಟರು ‘‘ಮಗಳೇ...’’ ಎಂದು ಕರೆದರು.

ತಂದೆಯ ಕಡೆಗೆ ನೋಡಿದಳು ಜಾನಕಿ. ‘‘ಮಗಳೇ...ಪಠ್ಯದ ಕಡೆಗೆ ಮಾತ್ರ ಗಮನ ಕೊಡು. ಪಠ್ಯದ ಕಡೆಗೆ ಮಾತ್ರ...’’ ಎಂದರು.

‘‘ಆಯಿತು ಅಪ್ಪಾಜಿ’’ ಎಂದಳು ಜಾನಕಿ. ತಂದೆಗೆ ತಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇಷ್ಟವಿಲ್ಲವೋ...

‘‘ನೋಡು...ಒಳ್ಳೆಯ ಅಂಕ ಬಂದರೆ, ಮುಂದಕ್ಕೆ ನಿನ್ನನ್ನು ಅಮೆರಿಕಕ್ಕೆ ಕಳುಹಿಸಿ ಮೆಡಿಕಲ್ ಓದಿಸುವ ಇರಾದೆ ನನಗುಂಟು. ಅಮೆರಿಕದಲ್ಲಿ ನನ್ನ ದೂರದ ಸಂಬಂಧಿಯೊಬ್ಬರಿದ್ದಾರೆ. ಅವರ ಮಗ ಅಲ್ಲೇ ಕಲಿಯುತ್ತಿದ್ದಾನೆ....ನೀನು ಮಾತ್ರ ಸಿಕ್ಕಿದವರ ಜೊತೆಗೆಲ್ಲ ಓಡಾಡಿ ಸಮಯ ವ್ಯರ್ಥ ಮಾಡಬೇಡ...’’ ಎಂದರು. ಒಂದೊಂದು ಶಬ್ದಗಳನ್ನು ಒತ್ತಿ ಒತ್ತಿ ಹೇಳಿದ್ದರು. ಮಾತಿನಲ್ಲಿ ಆದೇಶವಿತ್ತು. ಜಾನಕಿ ಆಯಿತು ಎಂಬಂತೆ ತಲೆಯಾಡಿಸಿದಳು. ಅಪ್ಪನ ಆದೇಶಕ್ಕೆ ಅವಳ ಎದೆ ಬಡಿದು ಕೊಳ್ಳತೊಡಗಿತ್ತು. ಹಾಸ್ಟೆಲ್‌ಗೆ ತಲುಪಿದಾಗ ಆಕೆಯನ್ನು ಸ್ವೀಕರಿಸಿದ್ದು ಮೀನಾಕ್ಷಿ.

‘‘ತಾಯಿ ಹೇಗಿದ್ದಾರೆ...’’ ಆಕೆಯ ಮೊದಲ ಪ್ರಶ್ನೆ.

‘‘ಏನೂ ಇಲ್ಲ. ಸಣ್ಣ ಜ್ವರ. ನನ್ನನ್ನು ನೋಡಬೇಕು ಎಂದು ತುಂಬಾ ಆಸೆಯಾಗಿತ್ತಂತೆ...’’ ಜಾನಕಿ ಚುಟುಕಿನಲ್ಲಿ ಮಾತು ಮುಗಿಸಿದಳು. ಮೀನಾಕ್ಷಿಯೂ ಹೆಚ್ಚು ಮಾತನಾಡಲಿಲ್ಲ. ಇನ್ನು ಪಠ್ಯದ ಕಡೆಗೇ ಹೆಚ್ಚು ಗಮನ ಹರಿಸುವುದು ಎಂದು ತೀರ್ಮಾನಿಸಿಯಾಗಿತ್ತು ಜಾನಕಿ. ಮರುದಿನ ಕಾಲೇಜಿಗೆ ವಿಶೇಷವಾಗಿ ಸಿದ್ಧವಾಗತೊಡಗಿದಳು. ಮುಖ್ಯವಾಗಿ ಅವಳಿಗೆ ಕಳೆದ ಏಳು ದಿನಗಳ ನೋಟ್ಸ್ ನ್ನು ಬರೆಯುವ ವಿಶೇಷ ಹೊರೆಯಿತ್ತು. ಮುಸ್ತಫಾನ ಬಳಿ ನೋಟ್ಸ್ ಕೇಳಿ ಆದಷ್ಟು ಬೇಗ ಮುಗಿಸಬೇಕು ಎಂದು ಯೋಚಿಸುತ್ತಿದ್ದಳು.

ಆದರೆ ಅಂದು ಮುಸ್ತಫಾ ತರಗತಿಯಲ್ಲಿ ಹಾಜರಿರಲಿಲ್ಲ. ‘ಛೇ...’ ಅನ್ನಿಸಿತು. ಒಂದು ದಿನ ತಡವಾದರೂ ಸರಿ, ಅವನದೇ ನೋಟ್ಸ್ ಪಡೆದುಕೊಳ್ಳಬೇಕು. ಆತನ ನೋಟ್ಸ್ ಅಚ್ಚುಕಟ್ಟಾಗಿರುತ್ತದೆ ಎಂದು ಯೋಚಿಸಿದಳು. ಒಂದಿಷ್ಟು ವಿಷಯಗಳನ್ನು ಮೀನಾಕ್ಷಿಯೊಂದಿಗೆ ಕೇಳಿ ಪಡೆದುಕೊಂಡಳು. ಆದರೆ ಜಾನಕಿಯ ದುರದೃಷ್ಟಕ್ಕೆ ಮಾರನೆಯ ದಿನವೂ ಮುಸ್ತಫಾ ಕಾಲೇಜಿಗೆ ಬಂದಿರಲಿಲ್ಲ. ಈಗ ಮೆಲ್ಲ ಮೀನಾಕ್ಷಿಯೊಂದಿಗೆ ಹೇಳಿಕೊಂಡಳು ‘‘ಈ ಮುಸ್ತಫಾ ಎರಡು ದಿನ ಯಾಕೆ ರಜೆ ಹಾಕಿದ್ದಾನೆ? ನನಗೆ ಅವನ ನೋಟ್ಸ್ ಬೇಕಾಗಿತ್ತು’’

 ಮೀನಾಕ್ಷಿ ತಟ್ಟನೆ ಹೇಳಿದಳು ‘‘ನಿನಗೆ ನೋಟ್ಸ್ ಅವನದೇ ಯಾಕೆ ಬೇಕು? ಬೇರೆ ಯಾರಲ್ಲಾದರೂ ಕೇಳು...’’

‘‘ಬೇಡ. ಅವನ ನೋಟ್ಸ್ ನೀಟಾಗಿರತ್ತೆ. ಅವನು ಬರಲಿ. ನಾಳೆ ಅವನಿಂದಲೇ ಪಡೆಯುವೆ’’ ಎಂದಳು ಜಾನಕಿ. ‘‘ನಾಳೆ ಅವನು ಬರುತ್ತಾನೆ ಎಂದು ಗ್ಯಾರಂಟಿಯೇನು?’’ ಮೀನಾಕ್ಷಿ ತಟ್ಟನೆ ಕೇಳಿದಳು.

‘‘ಅಂದರೆ...ಅವನು ನಾಳೆ ಬರಲಿಕ್ಕಿಲ್ವಾ? ಆರೋಗ್ಯ ಸರಿಯಿಲ್ವಾ?’’ ಜಾನಕಿ ಆತುರದಿಂದ ಕೇಳಿದಳು.

‘‘ಗೊತ್ತಿಲ್ಲ. ಆದರೆ ನೀನು ಮನೆಗೆ ಹೋದ ಎರಡು ದಿನಗಳ ಬಳಿಕ ಅವನೂ ಕಾಲೇಜಿಗೆ ಬರುತ್ತಿಲ್ಲ...ಏನೋ ಆಕ್ಸಿಡೆಂಟಾಗಿದೆ...ಆಸ್ಪತ್ರೆಗೆ ಸೇರಿದ್ದಾನೆ ಎಂದು ಯಾರೋ ಹೇಳಿದ್ದರು’’

ಜಾನಕಿ ಅದುರಿ ಬಿದ್ದಳು ‘‘ಆಕ್ಸಿಡೆಂಟಾ...ಇಷ್ಟು ದೊಡ್ಡ ವಿಷಯ ನನಗೆ ಯಾಕೆ ಹೇಳಲಿಲ್ಲ...’’

‘‘ಅದರಲ್ಲಿ ಅಷ್ಟು ದೊಡ್ಡ ವಿಷಯ ಎಂತದುಂಟು? ಅವನ ವಿಷಯ ನಾನ್ಯಾಕೆ ನಿನಗೆ ಹೇಳಬೇಕು?’’ ಮೀನಾಕ್ಷಿ ಕಡ್ಡಿ ಮುರಿದಂತೆ ಕೇಳಿದಳು.

‘‘ಅಲ್ಲ ಕಣೆ. ಅವನು ನಮ್ಮ ಫ್ರೆಂಡ್. ಆಕ್ಸಿಡೆಂಟ್ ಆಗಿದೆ ಎಂದರೆ ನಾವು ಹೋಗಿ ನೋಡುವುದು ಬೇಡವಾ?’’

‘‘ನನ್ನ ಫ್ರೆಂಡ್ ಅಲ್ಲ. ನಿನ್ನ ಫ್ರೆಂಡ್ ಕೂಡ ಅಲ್ಲ. ಅವನ ಸಹವಾಸ ಅಷ್ಟು ಒಳ್ಳೆಯದಲ್ಲ...ಆಕ್ಸಿಡೆಂಟ್ ಆಗಿದೆ. ಆಸ್ಪತ್ರೆಯಲ್ಲಿ ಇದ್ದಾಂತ ಸುದ್ದಿ....’’

‘‘ಯಾವ ಆಸ್ಪತ್ರೆಯಲ್ಲಿ?’’

‘‘ಗೊತ್ತಿಲ್ಲ. ಈಗ ಡಿಸ್ಚಾರ್ಜ್ ಆಗಿ ಮನೆಯಲ್ಲಿದ್ದಾನೆ ಎಂದು ಕಾಣುತ್ತದೆ’’

‘‘ಅವನು ಕಾಲೇಜಿಗೆ ಬರಲು ಎಷ್ಟು ದಿನ ತಗಲಬಹುದು...?’’

‘‘ನನಗೆ ಗೊತ್ತಿಲ್ಲ. ನೀನೂ ತುಂಬಾ ತಲೆಗೆ ಹಚ್ಚಿಕೊಳ್ಳಬೇಡಾ...ನಿನಗೆ ಬೇಕಾದ ನೋಟ್ಸ್ ನ್ನು ನಾನು ಬೇರೆ ಹುಡುಗಿಯರ ಕೈಯಿಂದ ತೆಗೆದುಕೊಡುತ್ತೇನೆ...ಬೇಡದ ವಿಷಯ ನಿನಗ್ಯಾಕೆ...ಪಾಠದ ಕಡೆಗೆ ಗಮನ ಕೊಡು...’’ ಖಡಕ್ಕನೆ ಉತ್ತರಿಸಿ ಆಕೆ ಅಲ್ಲಿಂದ ಹೊರಟು ಹೋದಳು. ಅವಳ ಮಾತು ಕೇಳಿ ಜಾನಕಿಗೆ ಜುಮ್ಮೆಂದಿತು. ಯಾಕೆಂದರೆ, ತಂದೆ ಆಡಿದ ಮಾತನ್ನೇ ಮೀನಾಕ್ಷಿ ಆಡಿ ಬಿಟ್ಟಿದ್ದಳು. ಅಂದರೆ ನಾನೀಗ ಪಾಠದ ಕಡೆಗೆ ಗಮನ ಕೊಡುತ್ತಿಲ್ಲವೇ? ನನ್ನಿಂದ ಏನಾದರೂ ತಪ್ಪಾಗಿ ಬಿಟ್ಟಿದೆಯೇ? ಇಷ್ಟು ದಿನ ಕಾಲೇಜಿಗೆ ಬಂದಿಲ್ಲ ಎಂದರೆ ದೊಡ್ಡ ಆಕ್ಸಿಡೆಂಟೇ ಆಗಿರಬೇಕು. ಅವನನ್ನು ನೋಡುವುದು, ಸಂತೈಸುವುದು ತಪ್ಪೇ? ಇದರಿಂದ ನನ್ನ ಕಲಿಕೆಗೆ ಸಮಸ್ಯೆಯಾಗುತ್ತದೆಯೇ? ಅವಳ ತಲೆ ಗೊಂದಲದ ಗೂಡಾಗಿತ್ತು. ಆ ಬಳಿಕ ಮೀನಾಕ್ಷಿಯ ಬಳಿ ಮುಸ್ತಫಾನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಅವರಿವರಿಂದ ಕೇಳಿ ನೋಟ್ಸ್ ಬರೆಯತೊಡಗಿದಳು. ಪಾಠದ ಕಡೆಗೆ ಗಮನ ಹರಿಸಿದಳು. ಆದರೂ ತಲೆಯೊಳಗೆ ಪ್ರಶ್ನೆಗಳ ಜೇನುಗೂಡು. ಒಂದು ವಾರ ಕಳೆದರೂ ಮುಸ್ತಫಾ ಬರದೇ ಇದ್ದಾಗ ಜಾನಕಿಗೆ ನಿಜಕ್ಕೂ ಅಚ್ಚರಿಯಾಗಿತ್ತು. ಮುಸ್ತಫಾನಿಗೆ ಮಾರಣಾಂತಿಕ ಆಕ್ಸಿಡೆಂಟ್ ಆಗಿರಬಹುದೇ? ಶಾಶ್ವತ ಕೈಕಾಲು ಮುರಿದಿರಬಹುದೇ? ಮೀನಾಕ್ಷಿ ತನ್ನ ಜೊತೆಗೆ ಏನನ್ನೋ ಮುಚ್ಚಿಡುತ್ತಿದ್ದಾಳೆ ಅನ್ನಿಸಿತ್ತು.

ಒಂದು ದಿನ ಆದದ್ದಾಗಲಿ ಎಂದು ಕನ್ನಡ ಪಂಡಿತರ ಬಳಿ ಸಾಗಿದಳು. ಜಾನಕಿಯನ್ನು ಕಂಡದ್ದೇ ‘‘ಬಾಮ್ಮ...ಏನಾಗಬೇಕಾಗಿತ್ತು?’’ ಎಂದು ಪಂಡಿತರು ಪ್ರೀತಿ ಸುರಿಸಿ ಕೇಳಿದರು.

ಅವಳು ಸ್ವಲ್ಪ ಹೊತ್ತು ವೌನವಾಗಿ ನಿಂತಳು. ‘‘ಏನಮ್ಮ? ಏನಾಗಬೇಕು ಹೇಳು?’’ ಪಂಡಿತರು ಮತ್ತೆ ಕೇಳಿದರು.

‘‘ಸಾರ್...ಮುಸ್ತಫಾ ಯಾಕೆ ಕಾಲೇಜಿಗೆ ಬರುತ್ತಿಲ್ಲ?’’ ಜಾನಕಿ ಕೇಳಿಯೇ ಬಿಟ್ಟಳು.

ಪಂಡಿತರು ಗಂಭೀರವಾದರು. ಸಣ್ಣಗೆ ಕೆಮ್ಮಿದ ಅವರು ‘‘ನೋಡಮ್ಮ...ಅವರು ಗಲ್ಫ್‌ಗೆ ವೀಸಾ ಸಿಕ್ಕಿದರೆ ಸುಯ್ಯಂತ ಹಾರಿ ಹೋಗ್ತಾರೆ..ಶಾಲೆ ಕಾಲೇಜು ಅವರಿಗೆ ನೆಪಕ್ಕೆ ಮಾತ್ರ. ಬಹುಶಃ ಅದೇನೋ ವೀಸಾ ಬಂದಿದೆ ಮಗನನ್ನು ಗಲ್ಫಿಗೆ ಕಳುಹಿಸುತ್ತಿದ್ದೇನೆ... ಎಂದು ಅವನ ತಂದೆ ಹೇಳಿದ ಹಾಗಿತ್ತು’’

‘‘ಆದರೆ ಅದೇನೋ ಆಕ್ಸಿಡೆಂಟ್‌ಆಗಿತ್ತಂತೆ...’’ ಜಾನಕಿ ಮತ್ತೆ ಕೇಳಿದಳು.

‘‘ಏನೋ ಗೊತ್ತಿಲ್ಲ. ಸಣ್ಣ ಆಕ್ಸಿಡೆಂಟ್ ಆಗಿರಬೇಕು. ಈಗ ಹುಶಾರಾಗಿದ್ದಾನೆ ಹುಡುಗ. ಮೊನ್ನೆ ನಾನು ಅವನ ಮನೆಗೆ ಹೋಗಿದ್ದೆ. ಅವನ ತಂದೆ ಮಾತನಾಡಿದರು. ಮಗನನ್ನು ಗಲ್ಫಿಗೆ ಕಳುಹಿಸುವ ಬಗ್ಗೆ ಹೇಳಿದರು. ಯಾರೋ ಸಂಬಂಧಿಕರು ವೀಸಾ ಕಳುಹಿಸಿದ್ದಾರಂತೆ...’’

ಜಾನಕಿಗೆ ಏನು ಪ್ರತಿಕ್ರಿಯಿಸಬೇಕು ಎಂದು ತಿಳಿಯಲಿಲ್ಲ.

 ‘‘ಸರಿ ಸಾರ್...’’ ಎಂದು ಕೊಠಡಿಯಿಂದ ಹೊರಟಳು. ಅಷ್ಟರಲ್ಲಿ ಪಂಡಿತರು ‘‘ಜಾನಕೀ...’’ ಎಂದು ಕರೆದವರು ‘‘ಪಾಠದ ಕಡೆ ಗಮನ ಕೊಡು. ಉಳಿದ ವಿಷಯಗಳೆಲ್ಲ ಬಿಟ್ಟು ಬಿಡು’’ ಎಂದರು.

‘ಪಾಠದ ಕಡೆ ಗಮನ ಕೊಡು!’ ಜಾನಕಿಯ ಎದೆಗೆ ಸಣ್ಣಗೆ ಚುಚ್ಚಿದಂತಾಯಿತು. ‘‘ಆಯಿತು ಸಾರ್’’ ಎಂದವಳೇ ತರಗತಿಯೆಡೆಗೆ ಧಾವಿಸಿದಳು. ಪಂಡಿತರ ಜೊತೆಗೆ ಮುಸ್ತಫಾನ ಕುರಿತು ವಿಚಾರಣೆ ನಡೆಸಿದ್ದನ್ನು ಮೀನಾಕ್ಷಿಯ ಜೊತೆಗೂ ಹೇಳಿಕೊಳ್ಳಲಿಲ್ಲ. ಯಾಕೋ ಇತ್ತೀಚೆಗೆ ಮೀನಾಕ್ಷಿ ಅನ್ಯಳಂತೆ ಕಾಣುತ್ತಿದ್ದಳು. ಅವಳ ಜೊತೆಗೆ ಹೆಚ್ಚು ಮಾತನಾಡುವುದು, ಬೆರೆಯುವುದೂ ಇಷ್ಟವಾಗುತ್ತಿರಲಿಲ್ಲ.

‘‘ನೀನೀಗ ಮೊದಲಿನಂತಿಲ್ಲ’’ ಮೀನಾಕ್ಷಿ ಹಾಸ್ಟೆಲ್‌ನಲ್ಲಿ ಜಾನಕಿಯನ್ನು ಒಮ್ಮೆ ಎಚ್ಚರಿಸಿದ್ದಳು.

‘‘ಪಾಠದ ಕಡೆಗೆ ಹೆಚ್ಚು ಗಮನ ಕೊಡ್ತಾ ಇದ್ದೇನೆ’’ ಜಾನಕಿ ಬಿರುಸಾಗಿ ನುಡಿದು ಬಿಟ್ಟಳು. ಮೀನಾಕ್ಷಿ ಪೆಚ್ಚಾದಳು.

ಇತ್ತೀಚಿನ ದಿನಗಳಲ್ಲಿ ತಂದೆ ಆಗಾಗ ಫೋನ್ ಮಾಡಿ ಮಗಳ ಜೊತೆಗೆ ಶಾಲಾ ಕಾಲೇಜುಗಳ ಚಟುವಟಿಕೆಗಳ ಕುರಿತಂತೆ ವಿಚಾರಿಸುತ್ತಿದ್ದರು. ತಾಯಿಯೂ ಫೋನ್‌ನಲ್ಲಿ ಬಹಳಷ್ಟು ಪ್ರೀತಿ ಸುರಿಸುತ್ತಿದ್ದರು. ಮಗಳ ಆರೋಗ್ಯ ವಿಚಾರಿಸುತ್ತಿದ್ದರು. ತಾಯಿ ನಗು ನಗುತ್ತಾ ಫೋನಿನಲ್ಲಿ ಮಾತನಾಡುವುದು ಅವಳಿಗೆ ಒಂದಿಷ್ಟು ಧೈರ್ಯ ಕೊಟ್ಟಿತು. ಒಂದೆರಡು ಬಾರಿ ಗುರೂಜಿಯವರೇ ಅನಿರೀಕ್ಷಿತವಾಗಿ ಹಾಸ್ಟೆಲ್‌ಗೆ ಭೇಟಿ ನೀಡಿದ್ದರು.

‘‘ಕಾಲೇಜು ಮಂಡಳಿಯ ಮೀಟಿಂಗ್ ಇತ್ತು. ನಿನ್ನನ್ನೊಮ್ಮೆ ನೋಡಿ ಹೋಗೋಣ ಎಂದು ಬಂದೆ’’ ಎಂದು ಮಗಳ ಜೊತೆ ಹೇಳುತ್ತಿದ್ದರು.

ಪಾಠದ ಕಡೆಗೆ ಗಮನ ಹರಿದಂತೆಲ್ಲ ಮುಸ್ತಫಾ ಅವಳ ಮನಸ್ಸಿನಿಂದ ತೆಳುವಾಗುತ್ತಾ ಹೋಗುತ್ತಿದ್ದ. ಆದರೂ ಒಮ್ಮಿಮ್ಮೆ, ಪೆಟ್ಟಿಗೆಯೊಳಗಿಂದ ಆ ಬಂಗಾರದ ಪೆನ್ನನ್ನು ಕೈಗೆತ್ತಿಕೊಂಡಾಗ ಅವನ ಮುಖ ಕಣ್ಣ ಮುಂದೆ ಬರುತ್ತಿತ್ತು. ಅದೇನೋ ಒಂದು ದುಗುಡ ಅವಳನ್ನು ಆವರಿಸಿಕೊಳ್ಳುತ್ತಿತ್ತು. ‘‘ಅವರ ಜಾತಿಯ ಜನರೇ ಹಾಗೆ...ಗಲ್ಫ್‌ಗೆ ಹೋಗುವುದೇ ಅವರ ಜೀವನದ ಅತೀ ದೊಡ್ಡ ಗುರಿ...ಪೆಟ್ಟಿಗೆ ತುಂಬಾ ಹಣ ಬಾಚಬಹುದಲ್ಲಾ...ಆಮೇಲೆ ಊರಿಗೆ ಬಂದು ದೊಡ್ಡ ಕಾಂಕ್ರಿಟ್ ಮನೆ ಕಟ್ಟುವುದು...’’ ಎಂದು ಮನದಲ್ಲೇ ಅಂದುಕೊಂಡು ಅವನ ನೆನಪನ್ನು ಅಳಿಸಲು ಯತ್ನಿಸುತ್ತಿದ್ದಳು.

‘‘ಪಾಪ...ಮುಸ್ತಫಾನಿಗೆ ಕಲಿಯಲು ಇಷ್ಟ ಇರಬಹುದು. ಅವನ ತಂದೆ ಒತ್ತಾಯ ಮಾಡಿರ ಬೇಕು...’’ ಎಂದೂ ತನಗೆ ತಾನೇ ಸಮಾಧಾನ ಪಡುವಳು.

‘‘ಆದರೂ ಮುಸ್ತಫಾನಿಗೆ ಎಷ್ಟೆಲ್ಲ ಗೊತ್ತಿತ್ತು. ಮಹಾಭಾರತ, ರಾಮಾಯಣವನ್ನು ಎಷ್ಟು ಚೆನ್ನಾಗಿ ಓದಿಕೊಂಡಿದ್ದ....ಅವನು ಇನ್ನಷ್ಟು ಓದಬೇಕಾಗಿತ್ತು...’’ ಜಾನಕಿ ಮನದಲ್ಲೇ ಅಂದುಕೊಳ್ಳುತ್ತಿದ್ದಳು. ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಉಳಿದು ಬರೇ ಓದನ್ನೇ ಕೇಂದ್ರವಾಗಿಟ್ಟುಕೊಂಡು, ಜಾನಕಿ ಮುಂದುವರಿಯ ತೊಡಗಿದಳು. ಎರಡನೆ ಹಂತದ ಪರೀಕ್ಷೆಯಲ್ಲಿ ಜಾನಕಿ ಪಡೆದ ಅಂಕಗಳನ್ನು ನೋಡಿದ್ದೇ ಪ್ರಾಂಶುಪಾಲರು ‘‘ಈ ಬಾರಿ ನಮ್ಮ ಕಾಲೇಜಿಗೆ ರ್ಯಾಂಕ್ ಖಂಡಿತಾ’’ ಎಂದು ಸಂಭ್ರಮಿಸಿದರು. ಗುರೂಜಿಯವರಿಗೂ ದೂರವಾಣಿಯಲ್ಲಿ ಈ ವಿಷಯ ತಿಳಿಸಿದರು. ಅದರಿಂದ ಪುಳಕಿತರಾದ ಗುರೂಜಿ ತನ್ನ ಪತ್ನಿಯ ಜೊತೆ ಪುತ್ತೂರಿನ ಹಾಸ್ಟೆಲ್‌ಗೆ ಬಂದು, ಜಾನಕಿಯನ್ನು ಭೇಟಿ ಮಾಡಿ ಶುಭಹಾರೈಕೆಯನ್ನು ತಿಳಿಸಿದರು.

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News