‘ಚಕ್ರವರ್ತಿ’ ಅಭಿಮಾನಿಗಳಿಗೆ ಮೀಸಲು

Update: 2017-04-15 18:39 GMT

ಭೂಗತಜಗತ್ತಿನ ಸಿನೆಮಾಗಳು ಕನ್ನಡಕ್ಕೆ ಹೊಸತೇನಲ್ಲ. ‘ಓಂ’ ಸಿನೆಮಾ ನಂತರಗಟ್ಟಿಯಾದ ಈ ಟ್ರೆಂಡ್ ಅನುಸರಿಸಿ ಹಲವಾರು ಸಿನೆಮಾ ಗಳು ಬಂದು ಹೋಗಿವೆ. ಇವುಗಳ ಪೈಕಿ ಬಹುಪಾಲು ಸಿನೆಮಾಗಳು ಹಳ್ಳಿಯಿಂದ ಬರುವ ಅಮಾಯಕ ನೊಬ್ಬ ಭೂಗತಜಗತ್ತು ಪ್ರವೇಶಿಸುವ ಚಿತ್ರಗಳೇ ಆಗಿರುತ್ತಿದ್ದವು. ರೌಡಿಯಿಸಂ ಜತೆಗೆ ಲವ್, ಮದರ್ ಸೆಂಟಿಮೆಂಟ್ ಬೆರೆಸಿ ನಿರ್ದೇಶಕರು ಕತೆಗಳನ್ನು ನಿರೂಪಿಸುತ್ತಿದ್ದರು. ಭೂಗತಜಗತ್ತಿನ ಕರಾಳ ಮುಖ ವನ್ನು ಅನಾವರಣಗೊಳಿಸುತ್ತಲೇ ಕೊನೆಗೊಂದು ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತಿತ್ತು. ‘ಚಕ್ರವರ್ತಿ’ಯೂ ಅಂಡರ್‌ವರ್ಲ್ಡ್ ಕತೆಯೇ. ಇಲ್ಲಿ ನಿರ್ದೇಶಕ ಚಿಂತನ್ ಎಂದಿನ ಅಂಡರ್‌ವರ್ಲ್ಡ್ ಸಿನೆಮಾಗಳನ್ನು ನೆನಪಿಸದೆ ಕೊಂಚ ಭಿನ್ನ ಹಾದಿಯಲ್ಲಿ ಸಾಗಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳನ್ನು ಮೆಚ್ಚಿಸುವ ಈ ಸಿನೆಮಾ ಇದರಾಚೆಗೆ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುವುದಿಲ್ಲ ಎನ್ನುವುದು ಮಿತಿಯಾಗಿ ತೋರುತ್ತದೆ.

‘ಚಕ್ರವರ್ತಿ’ ನೋಡುವ ಹೊತ್ತಿನಲ್ಲಿ ದಶಕದ ಹಿಂದೆ ತೆರೆಕಂಡ ಕೆ.ಎಂ.ಚೈತನ್ಯ ನಿರ್ದೇಶನದ ‘ಆ ದಿನಗಳು’ ಸಿನೆಮಾ ನೆನಪಾಗುತ್ತದೆ. ಬೆಂಗಳೂರು ಅಂಡರ್‌ವರ್ಲ್ಡ್ ಕಂಡ ನೈಜ ಘಟನೆಗಳು, ವ್ಯಕ್ತಿತ್ವ ಗಳನ್ನು ಆಧರಿಸಿ ತಯಾರಾದ ಚಿತ್ರವದು. ಉತ್ತಮ ಚಿತ್ರಕಥೆ, ಪಾತ್ರಗಳ ಹದವರಿತ ಕಲಾವಿದರ ನೈಜ ಅಭಿನಯ ಮತ್ತು ಆಕರ್ಷಕ ನಿರೂಪಣೆಯೊಂದಿಗೆ ಅದು ಮೈಲುಗಲ್ಲು ಎನಿಸಿಕೊಂಡಿತು.‘ಚಕ್ರವರ್ತಿ’ಯಲ್ಲಿಯೂ 80ರ ದಶಕದಲ್ಲಿ ರಾಜ್ಯರಾಜಕೀಯಕ್ಕೆ ಬೆಸೆದುಕೊಂಡಿದ್ದ ಭೂಗತ ಜಗತ್ತಿನ ಕತೆಯಿದೆ. ಆ ಕಾಲಘಟ್ಟದಲ್ಲಿ ಬರುವ ವ್ಯಕ್ತಿಗಳ ಚಿತ್ರಣವಿದ್ದರೂ ಅವು ವೀಕ್ಷಕರ ಮನಸ್ಸಿಗೆ ತಾಕುವುದಿಲ್ಲ. ಬದಲಿಗೆ ಸ್ಟಾರ್ ಹೀರೋ ಒಬ್ಬನ ಇಮೇಜಿಗೆ ಹೊಂದುವಂತಹ ಕತೆಯನ್ನು ಅಂದಿನ ಅಂಡರ್‌ವರ್ಲ್ಡ್‌ಗೆ ಹೆಣೆದಂತಿದೆ ಎನಿಸುತ್ತದೆ. ಸ್ಟಾರ್‌ಡಮ್‌ನ ಈ ಮಿತಿಗಳನ್ನು ಮೀರಲು ಚಿಂತನ್‌ಗೆ ಸಾಧ್ಯವಾಗಿಲ್ಲ.

ಚಿತ್ರದಲ್ಲಿ ಪ್ರೀತಿ, ಹಾಸ್ಯಕ್ಕೆ ಹೆಚ್ಚಿನ ಆಸ್ಪದವಿಲ್ಲ. ಮಚ್ಚು, ಲಾಂಗ್‌ಗಳ ಆರ್ಭಟವೂ ಇಲ್ಲ. ನಾಯಕನದ್ದು ಇಲ್ಲಿ ಮದುವೆ ನಂತರದ ಕತೆ. ಬಹುಶಃ ಇದು ದರ್ಶನ್‌ರ ಹಿಂದಿನ ಸಿನೆಮಾಗಳ ಏಕತಾನತೆಯನ್ನು ಮೀರುವ ನಿರ್ದೇಶಕರ ಪ್ರಯತ್ನವೂ ಇರಬಹುದು. ಆದರೆ ಪ್ರೀತಿ, ಹಾಸ್ಯದಿಂದ ವೀಕ್ಷಕರಿಗೆ ಸಿಗಬಹುದಾಗಿದ್ದ ರಿಲೀಫ್‌ಗೆ ಪರ್ಯಾಯವಾಗಿ ಸನ್ನಿವೇಶಗಳನ್ನು ಹೆಣೆಯುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ.ಇದರಿಂದಾಗಿ ಕೆಲವೆಡೆ ಸಿನೆಮಾ ಬೋರು ಹೊಡೆಸುತ್ತದೆ.ಅತಿಯಾದ ಹಿಂದಿ ಭಾಷೆಯ ಡೈಲಾಗ್‌ಗಳಿದ್ದು, ಅಲ್ಲೆಲ್ಲಾ ಕನ್ನಡ ಸಬ್‌ಟೈಟಲ್ ಕೊಟ್ಟಿದ್ದರೆ ಹಿಂದಿ ಬಾರದ ವೀಕ್ಷಕರಿಗೆ ಅನುಕೂಲವಾಗುತ್ತಿತ್ತು. ಉದ್ಯಮದ ಪ್ರತಿಸ್ಪರ್ಧಿ ಹೀರೋಗಳಿಗೆ ಟಾಂಗ್‌ಕೊಡುವ ಡೈಲಾಗ್‌ಗಳು ಇತ್ತೀಚಿನ ಸ್ಟಾರ್ ಸಿನೆಮಾಗಳ ಟ್ರೆಂಡ್! ಪುಣ್ಯಕ್ಕೆ ಈ ಚಿತ್ರದಲ್ಲಿ ಅಂತಹ ಸಂಭಾಷಣೆಗಳಿಲ್ಲ ಎನ್ನುವುದು ಅಭಿರುಚಿಯ ದೃಷ್ಟಿಯಿಂದ ಸಮಾಧಾನಕರ ಸಂಗತಿ.

ಚಿತ್ರದಲ್ಲಿನ ಅಬ್ಬರದ ಹಿನ್ನೆಲೆ ಸಂಗೀತ ಕೆಲವೊಮ್ಮೆ ಅಸಹನೀಯ ಎನಿಸುವುದು ಹೌದು. ಒಳ್ಳೆಯ ಸಾಹಿತ್ಯವಿರುವ ‘ಮತ್ತೆ ಮಳೆಯಾಗಿದೆ..’, ಒಂದು ಮಳೆಬಿಲ್ಲು...’ ಗೀತೆಗಳು ಜೋರು ಸಂಗೀತದ ಮಧ್ಯೆ ಕಳೆದುಹೋಗುತ್ತವೆ. ಮೂಲತಃ ಸಂಭಾಷಣೆ, ಚಿತ್ರಕಥೆಗಾರರಾದ ಚಿಂತನ್‌ಗೆ ಇದು ಚೊಚ್ಚಲ ನಿರ್ದೇಶನದ ಸಿನೆಮಾ. ಒಂದಷ್ಟು ಹೊಸ ಐಡಿಯಾಗಳೊಂದಿಗೆ ನಿರ್ದೇಶನಕ್ಕಿಳಿದಿರುವ ಅವರು ಮುಂದಿನ ದಿನಗಳಲ್ಲಿ ಪಳಗುವ ಸೂಚನೆಯನ್ನಂತೂ ನೀಡಿದ್ದಾರೆ. ಇನ್ನು, ಎರಡು ಭಿನ್ನ ಶೇಡ್‌ಗಳಲ್ಲಿ ಸಿನೆಮಾ ತುಂಬಿಕೊಂಡಿರುವ ದರ್ಶನ್ ತಮ್ಮ ಅಭಿಮಾನಿಗಳಿಗಂತೂ ನಿರಾಸೆ ಮೂಡಿಸುವುದಿಲ್ಲ. ನಿರ್ದೇಶಕ ದಿನಕರ್ ತೂಗುದೀಪ ಭೂಗತ ಪಾತಕಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಅವರು ನಿರ್ದೇಶಕರಾಗಿಯೇ ಮುಂದುವರಿಯುವುದು ಕ್ಷೇಮ! ನಾಯಕಿ ದೀಪಾ ಸನ್ನಿಧಿಗೆ ಅಭಿನಯಕ್ಕೆ ಒಂದಷ್ಟು ಅವಕಾಶವಿದ್ದು, ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ತೆರೆಯ ಮೇಲೆ ಕೆಲವೇ ಸೆಕೆಂಡುಗಳ ಕಾಲ ಬಂದು ಹೋಗುವ ತಮ್ಮ ಪಾತ್ರ ನೋಡಿದಾಗ ಸ್ವತಃ ಸಾಧು ಕೋಕಿಲ ಅವರಿಗೂ ಬೇಸರವಾಗಬಹುದು. ಇಂತಹ ಮತ್ತೊಂದೆರಡು ಪಾತ್ರಗಳೂ ಚಿತ್ರದಲ್ಲಿವೆ. ಹೀಗೆ, ಇಲ್ಲಿ ಒಂದಷ್ಟು ಕೊರತೆಗಳಿವೆ. ಚಿತ್ರವನ್ನು ಇನ್ನಷ್ಟು ಚೆಂದಗೊಳಿಸಬಹುದಾದ ಸಾಧ್ಯತೆಗಳಿದ್ದರೂ, ‘ಚಕ್ರವರ್ತಿ’ ತನ್ನ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ.

ರೇಟಿಂಗ್ : **1/2


ನಿರ್ದೇಶನ: ಚಿಂತನ್ ಎ.ವಿ., ನಿರ್ಮಾಣ: ಸಿದ್ಧಾಂತ್, ಸಂಗೀತ: ಅರ್ಜುನ್‌ಜನ್ಯ, ಛಾಯಾಗ್ರಹಣ: ಚಂದ್ರಶೇಖರ್ ಕೆ.ಎಸ್., ತಾರಾಬಳಗ: ದರ್ಶನ್, ದೀಪಾ ಸನ್ನಿಧಿ, ದಿನಕರ್, ಕುಮಾರ್ ಬಂಗಾರಪ್ಪ, ಆದಿತ್ಯ, ಸೃಜನ್ ಲೋಕೇಶ್ ಮತ್ತಿತರರು.

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News