ಬೇಗಂ ಜಾನ್: ವೇಶ್ಯೆಯರ ದೇಹಗಳ ಮೇಲೆ ಹಾದು ಹೋಗುವ ಗಡಿರೇಖೆಗಳು!

Update: 2017-04-15 18:42 GMT

‘ಬೇಗಂ ಜಾನ್’ ಕೆಲವು ಕಾರಣಗಳಿಗಾಗಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ದೇಶಕ್ಕೆ ಸ್ವಾತಂತ್ರ ದೊರಕಿದ ಹೊತ್ತಿನಲ್ಲೇ, ಸ್ವತಂತ್ರ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಿದ ವೇಶ್ಯೆಯರ ಕೋಠಾ ಒಂದಕ್ಕೆ ಸಂಬಂಧಪಟ್ಟ ವಿಭಿನ್ನ ಕತೆಯನ್ನು ಇದು ಹೊಂದಿದೆ. ಪುರುಷನ ಕ್ರೌರ್ಯಕ್ಕೆ ಹೆಣ್ಣು ಮತ್ತು ಭೂಮಿ ಬಲಿಪಶುವಾಗುವ ರೀತಿಗೆ ರುದ್ರ ರೂಪಕದಂತಿದೆ ‘ಬೇಗಂ ಜಾನ್’ ಕಥಾವಸ್ತು. ಅದಾಗಷ್ಟೇ ದೇಶಕ್ಕೆ ಸ್ವಾತಂತ್ರ ದೊರಕಿದೆ. ಇದೇ ಸಂದರ್ಭದಲ್ಲಿ ಬೋರ್ಡರ್ ಕಮಿಶನ್ ಮುಖ್ಯಸ್ಥ ಸರ್ ಸಿರಿಲ್ ರೆಡ್‌ಕ್ಲಿಫ್ ಅವರ ನಿರ್ದೇಶನದಂತೆ ಪಾಕಿಸ್ತಾನ ಮತ್ತು ಭಾರತವನ್ನು ಇಬ್ಭಾಗ ಮಾಡಲಾಗುತ್ತದೆ. ಅದಕ್ಕಾಗಿ ಗಡಿಯನ್ನು ನಿರ್ಮಿಸುವ ಕಾರ್ಯಾಚರಣೆ ಬಿರುಸಾಗಿ ನಡೆಯುತ್ತದೆ.

ಭಾರತದ ಪರವಾಗಿ ಹರ್ಷವರ್ಧನ್(ಆಶಿಷ್ ವಿದ್ಯಾರ್ಥಿ) ಮತ್ತು ಪಾಕಿಸ್ತಾನದ ಪರವಾಗಿ ಇಲ್ಯಾಸ್(ರಜತ್ ಕಪೂರ್) ಎಂಬ ಅಧಿಕಾರಿಗಳ ನೇತೃತ್ವದಲ್ಲಿ ಗಡಿ ಗುರುತಿಸುವ ಕಾರ್ಯ ಆರಂಭವಾಗುತ್ತದೆ. ಆಗ ಅವರ ದಾರಿಗೆ ತೊಡಕಾಗುವುದು ‘ಬೇಗಂ ಜಾನ್’ ವೇಶ್ಯಾಗೃಹ ಅಥವಾ ಬೃಹತ್ ಕೋಠಾ. ಗಡಿರೇಖೆ ಈ ಕೋಠಾದ ಮಧ್ಯದಿಂದಲೇ ಹಾದು ಹೋಗುತ್ತದೆ. ಆದುದರಿಂದ ಕೋಠಾವನ್ನು ತೆರವುಗೊಳಿಸಲೇ ಬೇಕು. ತನ್ನ ಕೋಠಾ ‘ಅರ್ಧ ಪಾಕಿಸ್ತಾನ-ಅರ್ಧ ಭಾರತ’ವಾಗಿ ಪರಿವರ್ತನೆಯಾಗಿದೆ ಎಂಬ ಸುದ್ದಿ ತಿಳಿದು ಬೇಗಂ ಜಾನ್ ಗಹಗಹಿಸಿ ನಗುತ್ತಾಳೆ. ಆದರೆ ಆ ನಗು ಅಂತಿಮವಾಗಿ ರುದ್ರದುರಂತವೊಂದರಲ್ಲಿ ಅವಸಾನವಾಗುತ್ತದೆ. ತನ್ನ ದೇಹ, ತನ್ನ ಕೋಠಾದ ಅಧಿಕಾರ ತನ್ನದು ಎನ್ನುವುದು ಬೇಗಂ ಜಾನ್ ವಾದ. ಈ ಗಡಿಗಳು ಹಾದು ಹೋಗುತ್ತಿರುವುದು ತಮ್ಮ ದೇಹದ ಮೇಲೆ ಎನ್ನುವುದು ಆಕೆಯ ತರ್ಕ. ಅವಳಿಗಾಗಲಿ, ಅವಳ ಜೊತೆಗಿರುವ ಇತರ ವೇಶ್ಯೆಯರಿಗಾಗಲಿ ಬೇರೆ ರಾಜಕೀಯಗಳು ಅರ್ಥವೇ ಆಗುವುದಿಲ್ಲ. ಅವರೆಲ್ಲ ತಮ್ಮ ಕೋಠಾವನ್ನು ಉಳಿಸುವುದಕ್ಕಾಗಿ ಹೋರಾಟವನ್ನೇ ಆಯ್ದುಕೊಳ್ಳುತ್ತಾರೆ. ಭಾರತ ಪಾಕಿಸ್ತಾನದ ಅಧಿಕಾರಿಗಳ ವಿರುದ್ಧ ಕೋವಿ ಎತ್ತುತ್ತಾರೆ. ಅಂತಿಮವಾಗಿ ತಮ್ಮ ಕೋಠಾದ ಜೊತೆಗೇ ಇಲ್ಲವಾಗುತ್ತಾರೆ.

2016ರಲ್ಲಿ ಬಂಗಾಳಿಯಲ್ಲಿ ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ ‘ರಾಜ್‌ಕಹೀನಿ’ ಚಿತ್ರದ ರಿಮೇಕ್ ‘ಬೇಗಂ ಜಾನ್’. ಬಂಗಾಳಿಯಲ್ಲಿ ರಿತುಪರ್ಣ ಸೇನ್‌ಗುಪ್ತಾ ನಿರ್ವಹಿಸಿದ ಪಾತ್ರವನ್ನು ‘ಬೇಗಂ ಜಾನ್’ ಚಿತ್ರದಲ್ಲಿ ವಿದ್ಯಾ ಬಾಲನ್ ನಿರ್ವಹಿಸಿದ್ದಾರೆ. ‘ಡರ್ಟಿ ಪಿಕ್ಚರ್’ ಚಿತ್ರದ ಬಳಿಕ ವಿದ್ಯಾಬಾಲನ್ ನಿರ್ವಹಿಸಿರುವ ಇನ್ನೊಂದು ಸ್ಫೋಟಕ ಪಾತ್ರ ಇದು. ವಿದ್ಯಾಬಾಲನ್ ನಿರ್ವಹಿಸಿದ ಪಾತ್ರದಿಂದಾಗಿಯೇ ಇಡೀ ಚಿತ್ರ ಸಹ್ಯವಾಗಿದೆ. ಕಟುವಾಸ್ತವಕ್ಕೆ ಹತ್ತಿರವಾಗಿರುವ ವೇಶ್ಯೆಯ ಹಸಿ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆಯಾದರೂ, ಸಭ್ಯ ಪ್ರೇಕ್ಷಕರಿಗೆ ಮುಜುಗರ ತರುವುದು ಖಂಡಿತ. ಹೆಣ್ಣು ಮತ್ತು ಭೂಮಿಯನ್ನು ಸಮೀಕರಿಸುವ ತೆಳು ಪ್ರಯತ್ನವೊಂದನ್ನು ಚಿತ್ರ ಮಾಡುತ್ತದೆ. ವೇಶ್ಯೆಯರ ಆಸೆ, ಕನಸುಗಳನ್ನು ಅವರ ಹತಾಶೆ, ನೋವುಗಳನ್ನು ಕೂಡ ತೆಳುವಾಗಿ ಮುಟ್ಟಿಕೊಂಡು ಹೋಗುತ್ತದೆ. ಇದೇ ಸಂದರ್ಭದಲ್ಲಿ, ಹೆಣ್ಣಿನ ಆತ್ಮಗೌರವ ಮತ್ತು ಘನತೆಯನ್ನು ವೇಶ್ಯೆಯರ ಮೂಲಕವೇ ಹೇಳಲು ಹೊರಟಿರುವುದು ಚಿತ್ರದ ಹೆಗ್ಗಳಿಕೆ.

ಆದರೆ ಸುದೀರ್ಘ ಎರಡೂವರೆ ಗಂಟೆ ಹೇಳುವಷ್ಟು ವಿಸ್ತಾರವಾದ, ಸಮೃದ್ಧ ವಸ್ತು ಇಲ್ಲಿಲ್ಲವಾದುದರಿಂದ ನಿರ್ದೇಶಕರು ಅನಗತ್ಯವಾಗಿ ಚಿತ್ರವನ್ನು ಅಲ್ಲಲ್ಲಿ ಎಳೆದಿದ್ದಾರೆ. ಚಿತ್ರ ಇದರಿಂದಾಗಿಯೇ ಬಿಗಿಯನ್ನು ಕಳೆದುಕೊಂಡು ನಿಧಾನಗತಿಯಲ್ಲಿ ಚಲಿಸುತ್ತದೆ. ದೇಶವಿಭಜನೆಯ ದುರಂತದ ಚೂರುಗಳನ್ನು ವಿವಿಧ ಸಂದರ್ಭಗಳಲ್ಲಿ ತೋರಿಸುವ ಪ್ರಯತ್ನ ಮಾಡುತ್ತಾರಾದರೂ ಅದು ಪರಿಣಾಮಕಾರಿಯಾಗಿ ಬಂದಿಲ್ಲ. ಹಲವೆಡೆ ಚಿತ್ರ ವಾಚ್ಯವಾಗಿದೆ. ಇನ್ನು ಕೆಲವೊಡೆ ಅನಗತ್ಯ ಮೆಲೋಡ್ರಾಮಗಳಿವೆ. ಬಾಲ್ಯ ಗೆಳೆಯರಾಗಿರುವ ಹರ್ಷವರ್ಧನ್ ಮತ್ತು ಇಲ್ಯಾಸ್ ಭಾರತ-ಪಾಕಿಸ್ತಾನ ಅಧಿಕಾರಿಗಳಾಗಿ ಮುಖಾಮುಖಿಯಾಗುವುದು, ಪರಸ್ಪರ ಅನಿವಾರ್ಯವಾಗಿ ದ್ವೇಷಿಸುವಂತಹ ಸ್ಥಿತಿಗೆ ಬರುವುದು ಇವೆಲ್ಲವುಗಳೂ ಗಟ್ಟಿ ತಳಹದಿಯ ಮೇಲೆ ನಿಂತಿಲ್ಲ. ಅಧಿಕಾರ ಕಳೆದುಕೊಂಡ ರಾಜನಾಗಿ ನಾಸಿರುದ್ದೀನ್ ಪಾತ್ರ ಸಣ್ಣದಾದರೂ, ವಾಸ್ತವಕ್ಕೆ ಹತ್ತಿರವಾಗಿರುವುದರಿಂದ ಮನಮುಟ್ಟುತ್ತದೆ.

ಕಬೀರ್ ಎನ್ನುವ ಖಳ ಪಾತ್ರವನ್ನು ಚಂಕಿಪಾಂಡೆ ಸಲೀಸಾಗಿ ನಿರ್ವಹಿಸಿದ್ದಾರೆ. ಸಂಗೀತ ಚಿತ್ರದ ಕತೆಗೆ ಪೂರಕವಾಗಿದೆ. ವೇಶ್ಯೆಯ ಒಳಗಿನ ಸಂತೋಷ, ದುಃಖ, ದುರಂತದ ಲಯವನ್ನು ಹಿಡಿದಿಟ್ಟುಕೊಂಡಿದೆ. ಚಿತ್ರ ಕೆಲವೊಮ್ಮೆ ಶ್ಯಾಮ್ ಬೆನಗಲ್ ಅವರ ‘ಮಂಡಿ’ಯನ್ನು ಹೋಲುತ್ತದೆ. ಆದರೆ ‘ಮಂಡಿ’ ಒಂದು ಅಪ್ಪಟ ಕಲಾತ್ಮಕ ಚಿತ್ರ. ಶಬನಾ ಅಜ್ಮಿಯ ಪಾತ್ರದಷ್ಟು ಪಕ್ವವಾದುದಲ್ಲ ಬೇಗಂ ಜಾನ್ ಪಾತ್ರ. ವಿದ್ಯಾಬಾಲನ್ ತನ್ನ ಪಾತ್ರಕ್ಕೆ ಶಕ್ತಿ ಮೀರಿ ನ್ಯಾಯವನ್ನು ಕೊಟ್ಟಿದ್ದಾರೆ. ಆದುದರಿಂದ, ಕ್ಯಾಮರ ಆಕೆಯ ಕಡೆಗೆ ತಿರುಗಿದಾಗಷ್ಟೇ ಚಿತ್ರ ತುಸು ಬಿರುಸನ್ನು ಪಡೆದುಕೊಳ್ಳುತ್ತದೆ. ಕೋಠಾದ ಹೊರಗೆ ನಡೆದ ಚಿತ್ರೀಕರಣಗಳೆಲ್ಲ ನೀರಸವಾಗಿವೆ. ಚಿತ್ರ ಆರಂಭವಾಗುವುದು 2016ರಲ್ಲಿ ರಾಜ್‌ಪಥ್ ಸಮೀಪ. ಒಂದು ಹೆಣ್ಣು ಪಾನಮತ್ತ ಯುವಕರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುವಾಗ ಹಣ್ಣು ಮುದುಕಿಯೊಬ್ಬಳು ಮುಂದೆ ಬಂದು ತನ್ನ ಒಂದೊಂದೇ ವಸ್ತ್ರವನ್ನು ಅವರ ಮುಂದೆ ಬಿಚ್ಚ ತೊಡಗುತ್ತಾಳೆ. ಅದನ್ನು ನೋಡಿ ಅವಮಾನಿತರಾಗಿ ತರುಣರು ಪರಾರಿಯಾಗುತ್ತಾರೆ. ಕಾಮ, ಹೆಣ್ಣು, ಭೂಮಿ, ವಿಭಜನೆ ಮತ್ತು ಕ್ರೌರ್ಯವನ್ನು ಇನ್ನಷ್ಟು ಕಲಾತ್ಮಕವಾಗಿ ನಿರೂಪಿಸುವ ಅವಕಾಶ ಶ್ರೀಜಿತ್‌ಗಿತ್ತು. ಅವರದನ್ನು ಕಳೆದುಕೊಂಡಿದ್ದಾರೆ ಎನ್ನುವುದೇ ಚಿತ್ರ ಮುಗಿದಾಗ ನಮ್ಮನ್ನು ತೀವ್ರವಾಗಿ ಕಾಡುತ್ತದೆ.

ರೇಟಿಂಗ್ : **1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ
 

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News