ದಿಲ್ಲಿ ಬಿಜೆಪಿಯಲ್ಲೀಗ ಆಂತರಿಕ ಬೇಗುದಿ
ಹೊಸದಿಲ್ಲಿ, ಎ.16: ಉತ್ತರ ಪ್ರದೇಶ ಚುನಾವಣೆಯ ಯಶಸ್ಸಿನಿಂದ ಬೀಗುತ್ತಿರುವ ಬಿಜೆಪಿಯ ದಿಲ್ಲಿ ಘಟಕದಲ್ಲಿ ಇದೀಗ ಆಂತರಿಕ ಬೇಗುದಿ ಶುರುವಾಗಿದೆ. ಪ್ರತಿಷ್ಠಿತ ದಿಲ್ಲಿ ಮಹಾನಗರಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸಿಗೆ ಬಲವಾದ ಪೆಟ್ಟು ಬಿದ್ದಿದ್ದು, ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 21 ಮಂದಿ ಸದಸ್ಯರನ್ನು ಬಿಜೆಪಿ ಉಚ್ಚಾಟಿಸಿದೆ. ಈ ಪೈಕಿ ಐವರು ಹಾಲಿ ಸದಸ್ಯರೂ ಸೇರಿದ್ದಾರೆ.
ಈ ತಿಂಗಳ 23ರಂದು ಚುನಾವಣೆ ನಡೆಯುವ ದಿಲ್ಲಿ ಕಣ ಇದೀಗ ರಾಜಕೀಯ ಕೆಂಡದುಂಡೆಯಾಗಿದ್ದು, ಎಲ್ಲ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ದಿಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಡಾ.ಪಂಕಜ್ ಸಿಂಗ್ (ರಣಹೊಳೆ), ಕೃಷ್ಣ ಗೆಹ್ಲೋಟ್ (ನವಾಡ) ಪ್ರವೀಣ್ ರಜಪೂತ್ (ಸಾಗರಪುರ ಪಶ್ಚಿಮ), ಸಂಧ್ಯಾ ವರ್ಮಾ (ಪತ್ಪರ್‌ಗಂಜ್) ಹಾಗೂ ನಿಕ್ಕಿ ಸಿಂಗ್ (ನ್ಯೂ ಅಶೋಕನಗರ) ಉಚ್ಚಾಟಿತ ಸದಸ್ಯರು. ಇವರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಕಣದಲ್ಲಿ ಉಳಿದ ಕಾರಣಕ್ಕೆ ಉಚ್ಚಾಟಿಸಲಾಗಿದೆ ಎಂದು ಪಕ್ಷ ಪ್ರಕಟಿಸಿದೆ.
ದಿಲ್ಲಿ ವಿವಿ ಮಾಜಿ ವಿದ್ಯಾರ್ಥಿ ಮುಖಂಡ ಮನೋಜ್ ಚೌಧರಿ ಅವರನ್ನೂ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ದಿಲ್ಲಿ ಬಿಜೆಪಿಯ ಮಾಧ್ಯಮ ಉಸ್ತುವಾರಿ ಪ್ರವೀಣ್ ಶಂಕರ್ ಪ್ರಕಟಿಸಿದ್ದಾರೆ. ಒಟ್ಟು 21 ಮಂದಿಯನ್ನು ಉಚ್ಚಾಟಿಸಲಾಗಿದೆ ಎಂದು ಹೇಳಿದ್ದಾರೆ. ದಿಲ್ಲಿಯ ಮೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾವ ಹಾಲಿ ಸದಸ್ಯರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. 140 ಪಾಲಿಕೆ ಸದಸ್ಯರ ಪೈಕಿ ಬಹುತೇಕ ಮಂದಿ ಪಕ್ಷದ ಆದೇಶಕ್ಕೆ ತಲೆಬಾಗಿದ್ದರೂ, ಒಂದು ವರ್ಗ ಮಾತ್ರ ಪಕ್ಷಕ್ಕೆ ಸವಾಲು ಹಾಕಿ ನಿಂತಿದೆ ಎಂದು ಪಕ್ಷದ ಮುಖಂಡರು ವಿವರಿಸಿದ್ದಾರೆ. ಕೆಲ ಸದಸ್ಯರು ಪಕ್ಷದ ನಿಲುವನ್ನು ಪ್ರತಿಭಟಿಸಿ ಕಾಂಗ್ರೆಸ್ ಸೇರಿದ್ದಾರೆ. ಮೂರು ಮಹಾನಗರ ಪಾಲಿಕೆಗಳ 272 ಸ್ಥಾನಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮತ ಎಣಿಕೆ 26ರಂದು ನಡೆಯಲಿದೆ.