×
Ad

ಉಗ್ರರ ದಾಳಿಗೆ ಪಿಡಿಪಿ ಕಾರ್ಯಕರ್ತನೊಬ್ಬ ಬಲಿ

Update: 2017-04-16 11:21 IST

ಶ್ರೀನಗರ, ಎ.16:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು  ಶನಿವಾರ ರಾತ್ರಿ ನಡೆಸಿದ ದಾಳಿಯಲ್ಲಿ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಕಾರ್ಯಕರ್ತನೋರ್ವ  ಮೃತಪಟ್ಟಿದ್ದಾರೆ.
ಪುಲ್ವಾಮ ಜಿಲ್ಲೆಯ ರಜ್ಪೊರಾ ಪ್ರದೇಶದಲ್ಲಿರುವ ಪಿಡಿಪಿ ಕಾರ್ಯಕರ್ತ ಬಶೀರ್ ಅಹ್ಮದ್ ದಾರ್ (30) ಅವರ ಮನೆಗೆ ಕಳೆದ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿ ಅವರನ್ನು ಕೊಂದು ಹಾಕಿದ್ದಾರೆ, ಘಟನೆಯ ವೇಳೆ ಸ್ಥಳದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಬಶೀರ್ ಅಹ್ಮದ್ ದಾರ್  ಮನೆಗೆ ಉಗ್ರರು  ಗುಂಡಿನ ದಾಳಿ ನಡೆಸಿ "ಆಜಾದಿ” ಘೋಷಣೆ ಕೂಗುವಂತೆ ಬೆದರಿಯೊಡ್ಡಿದ್ದಾರೆಂದು ತಿಳಿದು ಬಂದಿದೆ
ಅಹ್ಮದ್ ದಾರ್ ಅವರ ಮನೆಗೆ ನುಗ್ಗುವುದಕ್ಕೂ ಮುನ್ನ ಉಗ್ರರು, ಸ್ಥಳೀಯ ಬಸ್ ನಿಲ್ದಾಣದ ಬಳಿ  ಪಿಡಿಪಿ ಕಾರ್ಯಕರ್ತ ಅಲ್ತಾಫ್ ಅಹ್ಮದ್ ದಾರ್ ಎಂಬವರ  ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಅಲ್ತಾಫ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು  ತಿಳಿದು ಬಂದಿದೆ.
ಪೊಲೀಸ್ ಅಧಿಕಾರಿಯೊಬ್ಬರ ಚಿಕ್ಕಪ್ಪನಾಗಿರುವ ಮೃತ ಬಶೀರ್ ಅಹ್ಮದ್ ದಾರ್  ಮತ್ತು ಅಲ್ತಾಫ್ ಅಹ್ಮದ್ ದಾರ್  ಆಡಳಿತಾರೂಢ ಪಿಡಿಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳನ್ನು ವಿರೋಧಿಸುವ ಇವರನ್ನು ಇತ್ತೀಚೆಗೆ ಉಗ್ರರು ಅಡ್ಡಗಟ್ಟಿ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿಯುವಂತೆ ಬೆದರಿಯೊಡ್ಡಿದ್ದಾರೆಂದು  ಗೊತ್ತಾಗಿದೆ .
ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು ಕಳೆದ ರಾತ್ರಿ ಶೋಪಿಯಾನ್‌  ಜಿಲ್ಲೆಯ  ಇಬ್ಬರು ಪೊಲೀಸರ ಮನೆಗಳಿಗೆ ನುಗ್ಗಿ  ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಬೆದರಿಯೊಡ್ಡಿದ್ದಾರೆಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News